ಗಡಿಯಲ್ಲಿ ಏನಾಗ್ತಿದೆ..? ಸ್ಪಷ್ಟ ಚಿತ್ರಣ ನೀಡಲು ಪ್ರಧಾನಿಗೆ ಗೌಡರ ಒತ್ತಾಯ
ಬೆಂಗಳೂರು : ನಿನ್ನೆ ಲಡಾಖ್ ಪ್ರದೇಶದ ಗುಲ್ವಾನ್ ಬಳಿ ಭಾರತ-ಚೀನಾ ಸೈನಿಕರ ನಡುವೆ ನಡೆದ ಕಾಳಗದಲ್ಲಿ ಭಾರತದ ಮೂವರು ಯೋಧರು ಹುತಾತ್ಮರಾಗಿದ್ದಾರೆ. ಈ ಬಗ್ಗೆ ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ತೀವ್ರ ಕಳವಳ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ.
ಗೌಡರು ಟ್ವೀಟ್ ನಲ್ಲಿ.. ಇಂಡೋ-ಚೀನಾ ಗಡಿಭಾಗದ ಲಡಾಕ್ ನಲ್ಲಿ ಪರಿಸ್ಥಿತಿ ಕಳೆದ ಕೆಲವು ದಿನಗಳಿಂದ ಉದ್ವಿಗ್ನವಾಗಿದೆ. ಅಲ್ಲಿನ ಸಂಗತಿಗಳು ಗೊಂದಲಕಾರಿಯಾಗಿವೆ. ನಮ್ಮ ಸೈನಿಕರು ಏಕೆ ಪ್ರಾಣ ಕಳೆದುಕೊಂಡರು ಎಂದು ಪ್ರಶ್ನಿಸಿರುವ ಗೌಡರು, ರಾಷ್ಟ್ರದ ಹಿತದೃಷ್ಟಿಯಿಂದ ಈ ಸಂಬಂಧ ಸ್ಪಷ್ಟ ವಿವರಗಳನ್ನು ಒದಗಿಸುವಂತೆ ಅವರು ಮೋದಿ ಮತ್ತು ರಾಜನಾಥ್ ಸಿಂಗ್ ಅವರನ್ನು ಒತ್ತಾಯಿಸಿದ್ದಾರೆ. ನಿನ್ನೆ ರಾತ್ರಿ ಈ ಹಿಂಸಾಚಾರ ನಡೆದಿರುವುದು ಬೆಳಕಿಗೆ ಬಂದಿದೆ. ಚೀನೀ ಸೈನಿಕರು ಎಲ್ಎಸಿ ಗಡಿಭಾಗದಲ್ಲಿ
ಅತಿಕ್ರಮಣ ಮಾಡಿದ್ದರಿಂದ ಗಾಲ್ವನ್ ಕಣಿವೆಯಲ್ಲಿ ಹಲವಾರು ದಿನಗಳಿಂದಲೂ ಪ್ರಕ್ಷುಬ್ದ ವಾತಾವರಣ ಇದೆ. ವಿವಿಧ ಹಂತಗಳಲ್ಲಿ ಮಾತುಕತೆ ನಡೆದ ಬಳಿಕ ಎರಡೂ ಕಡೆಯ ಸೈನಿಕರನ್ನ ಹಿಂಪಡೆಯಲು ನಿರ್ಧರಿಸಲಾಯಿತು. ಈ ಸಂದರ್ಭದಲ್ಲೇ ಹಿಂಸಾಚಾರ ಆಗಿರುವುದು ಕಳವಳ ಮೂಡಿಸಿದೆ.








