ಅಜಿಂಕ್ಯಾ ರಹಾನೆ(71*), ಶಿವಂ ದುಬೆ(50) ಹಾಗೂ ಡೆವೋನ್ ಕಾನ್ವೆ(56) ಅವರುಗಳ ಸ್ಪೋಟಕ ಬ್ಯಾಟಿಂಗ್ ಮತ್ತು ಬೌಲರ್ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 49 ರನ್ಗಳ ಭರ್ಜರಿ ಗೆಲುವು ಸಾಧಿಸಿದ ಚೆನ್ನೈ ಸೂಪರ್ ಕಿಂಗ್ಸ್, ಈ ಜಯದ ಮೂಲಕ 16ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಕೊಲ್ಕತ್ತಾದ ಐತಿಹಾಸಿಕ ಈಡನ್ ಗಾರ್ಡನ್ಸ್ನಲ್ಲಿ ಭಾನುವಾರ ಸಂಜೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿತು. ರಹಾನೆ, ದುಬೆ ಹಾಗೂ ಕಾನ್ವೇ ಅವರುಗಳ ಅರ್ಧಶತಕದ ನೆರವಿನಿಂದ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 235 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ಕಠಿಣ ಸವಾಲನ್ನು ಬೆನ್ನತ್ತಿದ ಕೊಲ್ಕತ್ತಾ ನೈಟ್ರೈಡರ್ಸ್ 20 ಓವರ್ಗಳಲ್ಲಿ 8 ವಿಕೆಟ್ಗೆ 186 ರನ್ಗಳಿಸುವ ಮೂಲಕ ಸೋಲೊಪ್ಪಿಕೊಂಡಿತು.
ರಹಾನೆ-ದುಬೆ ಸ್ಟೋಟಕ ಆಟ:
ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಚೆನ್ನೈ ಸೂಪರ್ ಕಿಂಗ್ಸ್ಗೆ ಋತುರಾಜ್ ಗಾಯಕ್ವಾಡ್(35) ಹಾಗೂ ಡೆವೋನ್ ಕಾನ್ವೆ(56) ಮೊದಲ ವಿಕೆಟ್ಗೆ 73 ರನ್ಗಳ ಉತ್ತಮ ಅಡಿಪಾಯವನ್ನ ಹಾಕಿಕೊಟ್ಟರು. ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ಕಾನ್ವೇ ಅರ್ಧಶತಕ ಸಿಡಿಸಿ ತಂಡಕ್ಕೆ ಆಸರೆಯಾದರು. ಆದರೆ 1ನೇ ಕ್ರಮಾಂಕದಲ್ಲಿ ಬಂದ ಅಜಿಂಕ್ಯಾ ರಹಾನೆ(71* ರನ್, 29 ಬಾಲ್, 6 ಬೌಂಡರಿ, 6ಸಿಕ್ಸ್) ಕೆಕೆಆರ್ ಬೌಲರ್ಗಳ ಬೆವರಿಳಿಸಿದರು. ಸ್ಪೋಟಕ ಆಟವಾಡಿದ ರಹಾನೆ ಆಕರ್ಷಕ ಟೂರ್ನಿಯಲ್ಲಿ ಮತ್ತೆ ವೇಗದ ಅರ್ಧಶತಕ ದಾಖಲಿಸಿದರು.
ಇವರಿಗೆ ಸಾಥ್ ನೀಡಿದ ಶಿವಂ ದುಬೆ(50 ರನ್, 21 ಬಾಲ್, 2 ಬೌಂಡರಿ, 5 ಸಿಕ್ಸ್) ಸಹ ಅಬ್ಬರಿಸಿದರು. ಇವರಿಬ್ಬರು 3ನೇ ವಿಕೆಟ್ಗೆ 85 ರನ್ಗಳ ಉತ್ತಮ ಜೊತೆಯಾಟದ ಮೂಲಕ ತಂಡದ ಮೊತ್ತವನ್ನ 200ರ ಗಡಿದಾಟಿಸಿದರು. ಇನ್ನಿಂಗ್ಸ್ ಕೊನೆಯಲ್ಲಿ ಜಡೇಜಾ(18*) ಬಿರುಸಿನ ಆಟದ ಮೂಲಕ ತಂಡದ ಮೊತ್ತವನ್ನ 235ಕ್ಕೆ ಏರಿಸಿದರು. ಕೆಕೆಆರ್ ಪರ ಕೆಜ್ರೋಲಿಯಾ 2, ಚಕ್ರವರ್ತಿ ಹಾಗೂ ಸುಯಾಶ್ ಶರ್ಮ ತಲಾ 1 ವಿಕೆಟ್ ಪಡೆದರು.
ರಾಯ್-ರಿಂಕು ವ್ಯರ್ಥ ಹೋರಾಟ:
ಚೆನ್ನೈ ನೀಡಿದ 236 ರನ್ಗಳ ಕಠಿಣ ಟಾರ್ಗೆಟ್ ಚೇಸ್ ಮಾಡಿದ ಕೆಕೆಆರ್ ಕೇವಲ 1 ರನ್ಗಳಿಸುವಷ್ಟರಲ್ಲಿ ಎನ್ ಜಗದೀಸನ್(1) ಹಾಗೂ ಸುನೀಲ್ ನರೈನ್(0) ವಿಕೆಟ್ ಕಳೆದುಕೊಂಡು ಆಘಾತ ಕಂಡಿತು. ನಂತರ ಬಂದ ವೆಂಕಟೇಶ್ ಅಯ್ಯರ್(20) ಹಾಗೂ ನಾಯಕ ನಿತೀಶ್ ರಾಣಾ(27) ಅಲ್ಪ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಜೊತೆಯಾದ ಜೇಸನ್ ರಾಯ್(61 ರನ್, 26 ಬಾಲ್, 5 ಬೌಂಡರಿ, 5 ಸಿಕ್ಸ್) ಹಾಗೂ ರಿಂಕು ಸಿಂಗ್(53* ರನ್, 33 ಬಾಲ್, 3 ಬೌಂಡರಿ, 4 ಸಿಕ್ಸ್) ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. 5ನೇ ವಿಕೆಟ್ಗೆ ಈ ಜೋಡಿ 65 ರನ್ ಕಲೆಹಾಕಿದರು ತಂಡಕ್ಕೆ ಗೆಲುವು ತಂದುಕೊಡಲು ಸಾಧ್ಯವಾಗಲಿಲ್ಲ. ರಾಯ್ ವಿಕೆಟ್ ಪತನದ ಬಳಿಕ ಬಂದ ಯಾವುದೇ ಬ್ಯಾಟರ್ಗಳ ತಂಡಕ್ಕೆ ಆಸರೆ ಆಗದ ಪರಿಣಾಮ ಕೆಕೆಆರ್ ಹೋರಾಟ 186/8 ರನ್ಗಳಿಗೆ ಅಂತ್ಯಗೊಂಡಿತು. ಚೆನ್ನೈ ಪರ ಸಂಘಟಿತ ಬೌಲಿಂಗ್ ದಾಳಿ ನಡೆಸಿದ ದೇಶಪಾಂಡೆ ಮತ್ತು ತೀಕ್ಷಣ ತಲಾ 2 ವಿಕೆಟ್ ಪಡೆದರೆ. ಆಕಾಶ್ ಸಿಂಗ್, ಮೊಯಿನ್ ಅಲಿ, ಜಡೇಜಾ ಮತ್ತು ಪತಿರಾನ ತಲಾ 1 ವಿಕೆಟ್ ಪಡೆದರು.
ಸ್ಪೋಟಕ ಬ್ಯಾಟಿಂಗ್ನಿಂದ ತಂಡದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದ ಅಜಿಂಕ್ಯಾ ರಹಾನೆ ನಿರೀಕ್ಷೆಯಂತೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಈ ಗೆಲುವಿನ ಮೂಲಕ ಸಿಎಸ್ಕೆ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರಸ್ಥಾನಕ್ಕೇರಿದರೆ, 5ನೇ ಸೋಲಿನೊಂದಿಗೆ ಕೆಕೆಆರ್ 8ನೇ ಸ್ಥಾನದಲ್ಲೇ ಉಳಿದಿದೆ.