ಇಂಜನೀಯರಿಂಗ್ ವಿದ್ಯಾರ್ಥಿನಿ ಮೇಲೆ ಪ್ರೀತಿಸಿದ ಯುವಕ ಕುದಿಯುವ ಎಣ್ಣೆ ಸುರಿದ ಪರಿಣಾಮ ಆಕೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಈ ಘಟನೆ ಆಂಧ್ರಪ್ರದೇಶದ ಕಾಕಿನಾಡದಲ್ಲಿರುವ ಜವಾಹರ್ ಲಾಲ್ ನೆಹರು ತಾಂತ್ರಿಕ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯ ಮೇಲೆಯೇ ಕುದಿಯುವ ಎಣ್ಣೆ ಎರಚಲಾಗಿದ್ದು, ಸದ್ಯ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಏಲೂರು ಜಿಲ್ಲೆಯ ತನ್ನ ಮನೆಯ ಕೊಠಡಿಯಲ್ಲಿ ಯುಕ ಆಕೆಯ ಕೈ ಮತ್ತು ಕಾಲುಗಳ ಮೇಲೆ ಕುದಿಯುವ ಎಣ್ಣೆಯನ್ನು ಸುರಿದಿದ್ದಾನೆ. ಸಂತ್ರಸ್ತೆ ಭಾನುವಾರ ಬೆಳಿಗ್ಗೆ ತಪ್ಪಿಸಿಕೊಂಡು ಪೊಲೀಸರಿಗೆ ದೂರು ನೀಡಿದ ನಂತರ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಸದ್ಯ ಯುವತಿಯನ್ನು ಏಲೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸರ ಪ್ರಕಾರ, ಸಂತ್ರಸ್ತೆ ಮೂರನೇ ವರ್ಷದ ಎಂಜನೀಯರಿಂಗ್ ವಿದ್ಯಾರ್ಥಿನಿ. ಏಲೂರು ನಿವಾಸಿಯಾಗಿರುವ ಯುವತಿ ದುಗ್ಗಿರಾಳ ನಿವಾಸಿ ಅನುದೀಪ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಆತ ಆಕೆಯನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದ. ಐದು ದಿನಗಳ ಹಿಂದೆ ಅನುದೀಪ್ ವಿದ್ಯಾರ್ಥಿನಿಯನ್ನು ದುಗ್ಗಿರಾಳದಲ್ಲಿರುವ ತನ್ನ ಮನೆಗೆ ಕರೆದುಕೊಂಡು ಹೋಗಿದ್ದ. ಅಲ್ಲಿ ಆತ ವಿದ್ಯಾರ್ಥಿನಿಯನ್ನು ಒಂದು ಕೋಣೆಯಲ್ಲಿ ಕಟ್ಟಿ ಹಾಕಿ ಹಿಂಸಿಸುತ್ತಿದ್ದ.
ಅಲ್ಲದೇ, ಕೊಲೆ ಬೆದರಿಕೆ ಹಾಕಿದ್ದ. ಮಧ್ಯರಾತ್ರಿಯ ನಂತರ ನೇಣು ಬಿಗಿದು ಕೊಲ್ಲಲು ಯೋಜಿಸಿದ್ದ ಎಂದು ಸಂತ್ರಸ್ಥೆ ಪೊಲೀಸರಿಗೆ ತಿಳಿಸಿದ್ದಾಳೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತಲೆ ಮರೆಸಿಕೊಂಡಿರುವ ಅನುದೀಪ್ ಗಾಗಿ ಹುಡುಕಾಟ ನಡೆಸಿದ್ದಾರೆ. ಆರೋಪಿಯು ಗಾಂಜಾ ಹಾಗೂ ಇನ್ನಿತರ ಮಾನಸಿಕ ಮಾದಕ ವ್ಯಸನಿಯಾಗಿದ್ದು, ಪ್ರೀತಿಯ ಹೆಸರಿನಲ್ಲಿ ಹಲವಾರು ಹುಡುಗಿಯರನ್ನು ವಂಚಿಸುತ್ತಿದ್ದ ಎನ್ನಲಾಗಿದೆ.