ಸತತ ಸೋಲುಗಳಿಂದ ಕಂಗೆಟ್ಟಿರುವ ಕಳೆದ ಬಾರಿಯ ರನ್ನರ್ಅಪ್ ರಾಜಸ್ಥಾನ ರಾಯಲ್ಸ್ ಇಂದು ತವರಿನಲ್ಲಿ ಅಗ್ರಸ್ಥಾನಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಸಿಎಸ್ಕೆ ತಂಡಕ್ಕೆ ಇದು ಸೇಡಿನ ಕದನವಾಗಿದೆ.
ಜೈಪುರದ ಸವಾಯಿ ಮಾನಸಿಂಗ್ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಮತ್ತೆ ಗೆಲುವಿನ ಲಯಕ್ಕೆ ಮರಳಲು ಹೋರಾಡಲಿದೆ. ಇತ್ತ ಚೆನ್ನೈ ತಂಡ ಹ್ಯಾಟ್ರಿಕ್ ಗೆಲುವು ಸಾಧಿಸಲು ಪಣ ತೊಟ್ಟಿದೆ. ಚೆನ್ನೈ ತಂಡ ಆರಂಭದಲ್ಲಿ ಸೋತರೂ ತಂಡದಲ್ಲಿ ಬದಲಾವಣೆ ಮಾಡಲಿಲ್ಲ. ಇದೀಗ ಸ್ಪೋಟಕ ಬ್ಯಾಟಿಂಗ್ ಮಾಡುತ್ತಿದೆ. ಋತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೆ , ಅಜಿಂಕ್ಯ ರಹಾನೆ ಮತ್ತು ಶಿವಂ ದುಬೆ ಅಬ್ಬರಿಸುತ್ತಿದ್ದಾರೆ.
ಇಂದಿನ ಪಂದ್ಯ ಚೆನ್ನೈ ತಂಡದ ಬ್ಯಾಟಿಂಗ್ ಮತ್ತು ರಾಯಲ್ಸ್ ತಂಡದ ಗುಣ ಮಟ್ಟದ ಸ್ಪಿನ್ನರ್ಗಳ ನಡುವಿನ ಕದನವಾಗಿದೆ. ಇತ್ತೀಚೆಗೆ ಚೆಪಾಕ್ ಅಂಗಳದಲ್ಲಿ ಚೆನ್ನೈ ವಿರುದ್ಧ ರಾಜಸ್ಥಾನ ರೋಚಕ ಗೆಲುವು ದಾಖಲಿಸಿತ್ತುಘಿ. ಇಂದಿನ ಪಂದ್ಯದಲ್ಲೂ ಮತ್ತೊಂದು ರೋಚಕ ಕದನವನ್ನು ನಿರೀಕ್ಷಿಸಲಾಗಿದೆ. ಡೆವೊನ ಕಾನ್ವೆ ಈ ಋತುವಿನಲ್ಲಿ 7 ಪಂದ್ಯಗಳಿಂದ 314 ರನ್ ಪೇರಿಸಿ ಅತಿ ಹೆಚ್ಚು ರನ್ ಹೊಡೆದ ಎರಡನೆ ಬ್ಯಾಟರ್ ಎನಿಸಿದ್ದಾರೆ.
ಅನುಭವಿ ಬ್ಯಾಟರ್ ಅಜಿಂಕ್ಯ ಕೋಲ್ಕತ್ತಾ ವಿರುದ್ಧ ಸೋಟಕ ಬ್ಯಾಟಿಂಗ್ ಮಾಡಿದ ರಹಾನೆ 29 ಎಸೆತಗಳಲ್ಲಿ 79 ರನ್ ಹೊಡೆದು ಒಳ್ಳೆಯ ಫಾರ್ಮ್ನಲ್ಲಿದ್ದಾರೆ. 199.04 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಚೆನ್ನೈ ವಿರುದ್ಧ ಮೊದಲ ಮುಖಾಮುಖಿಯಲ್ಲಿ ರೋಚಕವಾಗಿ 3 ರನ್ಗಳಿಂದ ಗೆದ್ದಿದ್ದರಿಂದ ರಾಜಸ್ಥಾನ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಆ ಪಂದ್ಯದಲ್ಲಿ ಚೆನ್ನೈ ಗೆಲುವಿನ ಸನಿಹಕ್ಕೆ ಸಾಗಿ ಸೋತಿತ್ತು.
ಈ ಋತುವಿನಲ್ಲಿ 5 ಪಂದ್ಯಗಳನ್ನು ಗೆದ್ದಿರುವ ಚೆನ್ನೈ ಇಂದಿನ ಪಂದ್ಯವನ್ನು ಗೆದ್ದರೆ ಧೋನಿ ಪಡೆ ಪ್ಲೇ ಆಫ್ ಹಂತವನ್ನು ಖಚಿತಪಡಿಸಿಕೊಳ್ಳಲಿದೆ.
ರಾಯಲ್ಸ್ ತಂಡಕ್ಕೆ ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್ ಮತ್ತು ನಾಯಕ ಸಂಜು ಸ್ಯಾಮ್ಸನ್ ಬ್ಯಾಟಿಂಗ್ನಲ್ಲಿ ರನ್ ಮಳೆ ಸುರಿಸಿ ತಂಡದ ಸ್ಪಿನ್ನರ್ಗಳಾದ ಆರ್.ಅಶ್ವಿನ್ ಮತ್ತು ಯಜ್ವಿಂದರ್ ಚಾಹಲ್ಗೆ ಸಹಾಯ ಮಾಡಬೇಕು. ಧೋನಿ ರಾಜಸ್ಥಾನದಲ್ಲಿ ಆಡುತ್ತಿದ್ದರೂ ಕೊನೆಯ ಐಪಿಎಲ್ ಆಡುತ್ತಿರುವುದರಿಂದ ಅಭಿಮಾನಿಗಳು ಅವರಿಂದ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ.