ಲಕ್ನೋ: ಮಹಿಳಾ ಪೇದೆಯೊಬ್ಬರೊಂದಿಗೆ ಅಸಭ್ಯವಾಗಿ ನಡೆದುಕೊಂಡು, ಸಮವಸ್ತ್ರ ಹರಿದು ಹಾಕಿ ಅಮಾನುಷವಾಗಿ ನಡೆದುಕೊಂಡಿರುವ ಘಟನೆ ಉತ್ತರ ಪ್ರದೇಶದ(Uttar Pradesh) ಬರೇಲೆಯಲ್ಲಿ ನಡೆದಿದೆ.
ಪೊಲೀಸರು ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯೊಬ್ಬನನ್ನು ಬಂಧಿಸಿದ್ದರು. ಆದರೆ, ಈ ಬಂಧನದ ವಿರುದ್ಧ ಬಂಧಿತನಾಗಿರುವ ಶಬ್ಬು ಕುಟುಂಬಸ್ಥರು ಶಿಶ್‌ಗಢ ಪೊಲೀಸ್ ಠಾಣೆಗೆ ಆಗಮಿಸಿ ಗಲಾಟೆ ನಡೆಸಿದ್ದರು. ಈ ಸಂದರ್ಭದಲ್ಲಿ ಮಹಿಳಾ ಪೇದೆಯೊಬ್ಬರ ಮೇಲೆ ಹಲ್ಲೆ ನಡೆಸಿ ಅವರ ಸಮವಸ್ತ್ರಗಳನ್ನು ಹರಿದು ಹಾಕಿದ್ದಾರೆ ಎನ್ನಲಾಗಿದೆ.
ಮಾ. 20ರಂದು ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯ ತಂದೆ ಶಬ್ಬು(23) ವಿರುದ್ಧ ದೂರು ದಾಖಲಿಸಿದ್ದರು. ಆದರೆ, ಆತನ ಕುಟುಂಬಸ್ಥರು ನಮ್ಮ ಹುಡುಗನ ಮೇಲೆ ಸುಳ್ಳು ಆರೋಪ ಮಾಡಿ ದೂರು ಸಲ್ಲಿಸಿದ್ದಾರೆ ಎಂದು ಠಾಣೆಗೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ಆತನ ಕುಟುಂಬ ಸದಸ್ಯರಾದ ಶಬ್ಬೀರ್, ಶಹನಾಜ್, ತರನ್ನುಮ್, ಫೂಲ್ಜಹಾನ್ ಮತ್ತು ಶೈದಾನ್ ಪೊಲೀಸ್ ಠಾಣೆಯಲ್ಲಿ ಗಲಾಟೆ ನಡೆಸಿ, ಮಹಿಳಾ ಪೇದೆಯ ಸಮವಸ್ತ್ರ ಹರಿದು ಹಾಕಿ, ಪರಾರಿಯಾಗಲು ಯತ್ನಿಸಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜ್‌ಕುಮಾರ್ ಅಗರ್ವಾಲ್ ಹೇಳಿದ್ದಾರೆ.
ಕೂಡಲೇ ಪೊಲೀಸ್ ಸಿಬ್ಬಂದಿ ಧಾವಿಸಿ, ಐವರನ್ನು ಬಂಧಿಸಿದ್ದಾರೆ. ಸದ್ಯ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.








