ಬೆಂಗಳೂರು ನಗರದಲ್ಲಿ ಮತದಾನ ಉತ್ತೇಜಿಸುವ ಉದ್ಧೇಶದಿಂದ ನೃಪತುಂಗ ರಸ್ತೆಯಲ್ಲಿರುವ ಭಾರತೀಯ ರಿಸರ್ವ್ ಬ್ಯಾಂಕ್ ಬಳಿಯ ಹೊಟೇಲ್ ನಿಸರ್ಗ್ ಗ್ರ್ಯಾಂಡ್ ನಲ್ಲಿ ಮತದಾನ ಮಾಡಿದವರಿಗೆ ಉಚಿತ ತಿಂಡಿ ಹಾಗೂ ಮೊದಲ ಬಾರಿ ಮತ ಚಲಾಯಿಸುವ ಮೊದಲ 100 ಜನರಿಗೆ ಕನ್ನಡ ಸಿನಿಮಾಗೆ ಉಚಿತ ಟಿಕೆಟ್ ನೀಡುವುದಾಗಿ ಘೋಷಿಸಿದೆ.
ಮೇ 10ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಮತದಾನ ಮಾಡಿದ ಗುರುತು ತೋರಿಸಿ, ನಿಸರ್ಗ್ ಗ್ರ್ಯಾಂಡ್ ನಲ್ಲಿ ಉಚಿತವಾಗಿ ಬೆಣ್ಣೆ ಖಾಲಿ ದೋಸೆ, ಮೈಸೂರು ಪಾಕ್ ಮತ್ತು ತಂಪು ಪಾನಕ ಸವಿಯಬಹುದು. ಇದೊಂದು ಅಪ್ಪಟ ಸಾಮಾಜಿಕ ಕಳಕಳಿಯುಳ್ಳ ರಾಜಕೀಯೇತರ ಕಾರ್ಯಕ್ರಮವಾಗಿದೆ ಎಂದು ಹೊಟೇಲ್ ನ ಮಾಲೀಕ ಎಸ್.ಪಿ. ಕೃಷ್ಣರಾಜು ಹೇಳಿದ್ದಾರೆ.
ಈ ನಿಟ್ಟಿನಲ್ಲಿ ಹೊಟೇಲ್ ಎದುರು ದೊಡ್ಡ ಫಲಕದಲ್ಲಿ ಮತದಾನದ ಹಕ್ಕು ಚಲಾಯಿಸಿ ಸಮೃದ್ಧ ಭಾರತವನ್ನು ನಿರ್ಮಿಸಿ, ಮತದಾನ ಸಂಭ್ರಮ ಆದಾಗ ದೇಶ ಬದಲಾಗುತ್ತದೆ ಎಂಬ ಘೋಷಣೆಗಳಿವೆ.








