ಬೆಂಗಳೂರು : ಎಂಎಲ್ ಸಿ ಆಗುವ ಮೂಲಕ ಮಂತ್ರಿಯಾಗುವ ಕನಸ್ಸು ಕಂಡಿದ್ದ ಮಾಜಿ ಸಚಿವ ಹೆಚ್. ವಿಶ್ವನಾಥ್ ಗೆ ಬಿಜೆಪಿ ಹೈಕಮಾಂಡ್ ಶಾಕ್ ನೀಡಿದೆ. ಪರಿಷತ್ ಟಿಕೆಟ್ ಕೈ ತಪ್ಪಿದ್ದಕ್ಕೆ ಹಳ್ಳಿಹಕ್ಕಿ ಬೇಸರ ಹೊರಹಾಕಿದ್ದು, ಇದರ ಹಿಂದೆ ದೊಡ್ಡ ಷಡ್ಯಂತ್ರವೇ ಅಡಗಿದೆ ಎಂದು ಅವರು ಆರೋಪಿಸಿದ್ದಾರೆ.
ಅಲ್ಲದೆ ತಮಗೆ ವಿಧಾನ ಪರಿಷತ್ ಟಿಕೆಟ್ ತಪ್ಪಲು ಸಿದ್ದರಾಮಯ್ಯ ಕಾರಣ ಎಂದು ಅವರು ಹೇಳಿಕೆ ನೀಡಿದ್ದಾರೆ. ಇದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ‘ಹಾಗಾದರೆ ಅವನ ಪ್ರಕಾರ ಬಿಜೆಪಿಗೂ ನಾನೇ ಹೈಕಮಾಂಡ್’ ಎಂದು ಲೇವಡಿ ಮಾಡಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಪರಿಷತ್ ಚುನಾವಣೆ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ‘ಕಾಂಗ್ರೆಸ್ ನ ವಿಧಾನ ಪರಿಷತ್ ಚುನಾವಣೆ ಅಭ್ಯರ್ಥಿಗಳಿಗೆ ಬಿ ಫಾರಂ ಕೊಟ್ಟಿದ್ದೇವೆ. ಸುಮಾರು 270 ಅರ್ಜಿಗಳು ಬಂದಿದ್ದವು. ಅವೆಲ್ಲವನ್ನೂ ಹೈಕಮಾಂಡ್ ಗೆ ಕಳುಹಿಸಿದ್ದೆವು. ಅಂತಿಮವಾಗಿ ಹೈಕಮಾಂಡ್ ನಜೀರ್ ಅಹಮದ್ ಮತ್ತು ಬಿ.ಕೆ. ಹರಿಪ್ರಸಾದ್ ಅವರನ್ನು ಆಯ್ಕೆ ಮಾಡಿದೆ. ಇಬ್ಬರನ್ನೂ ಒಮ್ಮತದಿಂದ ಚುನಾವಣೆಗೆ ಆಯ್ಕೆ ಮಾಡಲಾಗಿದೆ’ ಎಂದಿದ್ದಾರೆ.
ಇದೇ ವೇಳೆ ವಿಶ್ವನಾಥ್ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ‘ಎಂಎಲ್ ಸಿ ಚುನಾವಣೆಗೆ ಹೆಚ್ .ವಿಶ್ವನಾಥ್ ಗೆ ಬಿಜೆಪಿ ಟಿಕೆಟ್ ಕೈತಪ್ಪಿದ್ದಕ್ಕೆ ನಾನೇ ಕಾರಣ ಅನ್ನೋದಾದರೆ ಅವನ ಪ್ರಕಾರ ನಾನು ಬಿಜೆಪಿ ಹೈಕಮಾಂಡ್ ಆಗಿರಬೇಕು. ಅವನಿಗೆ ಬುದ್ಧಿ ಇಲ್ಲ. ಬಿಜೆಪಿ ನಾಯಕರ ನಿರ್ಧಾರದಿಂದ ಆತನಿಗೆ ಎಂಎಲ್ ಸಿ ಟಿಕೆಟ್ ತಪ್ಪಿದೆ’ ಎಂದು ಸಿದ್ದರಾಮಯ್ಯ ಏಕವಚನದಲ್ಲೇ ವಿಶ್ವನಾಥ್ ಆರೋಪಕ್ಕೆ ಕಿಡಿಕಾರಿದರು.








