ಮಂಗಳೂರು: ಪ್ರತಿ ವರ್ಷದಂತೆ ಆದರೆ, ಇಷ್ಟು ಹೊತ್ತಿಗೆ ರಾಜ್ಯದಲ್ಲಿ ಮುಂಗಾರು ಪ್ರವೇಶವಾಗಿ, ರೈತರ ಚಟುವಟಿಕೆಗಳು ಗರಿಗೆದರುತ್ತಿದ್ದವು. ಆದರೆ, ಈ ಬಾರಿ ಮುಂಗಾರು ವಿಳಂಬವಾಗುತ್ತಿದ್ದು, ರೈತರ ಆತಂಕಕ್ಕೆ ಕಾರಣವಾಗುತ್ತಿದೆ.
ಮುಂಗಾರು ಪ್ರವೇಶ ಕೇರಳಕ್ಕೂ ನಿಧಾನವಾಗುತ್ತಿದೆ. ಹೀಗಾಗಿ ಹವಾಮಾನ ಇಲಾಖೆಯು ಹೆಚ್ಚಿನ ಅಧ್ಯಯನ ನಡೆಸುತ್ತಿದೆ. ಕೇರಳದಲ್ಲಿ ಮುಂಗಾರು ಪ್ರವೇಶ ಜೂನ್ 4ರ ಬಳಿಕ ಆಗಬಹುದು ಎಂದು ಐಎಂಡಿ ಮೊದಲು ವರದಿ ಮಾಡಿತ್ತು. ಆದರೆ, ಸದ್ಯ ಕೇರಳಕ್ಕೆ ಜೂನ್ 7ರಿಂದ 8ರೊಳಗೆ ಮುಂಗಾರು ಪ್ರವೇಶವಾಗುವ ಸಾಧ್ಯತೆ ಇದೆ ಎಂದು ಅಂದಾಜು ವರದಿ ನೀಡಿದೆ.
ಒಂದು ವೇಳೆ ಕೇರಳಕ್ಕೆ ಮುಂಗಾರು ಪ್ರವೇಶ ಜೂನ್ 8ಕ್ಕೆ ಆದರೆ, ಕರ್ನಾಟಕ ರಾಜ್ಯದ ಕರಾವಳಿಗೆ ಜೂನ್ 10ರಿಂದ 12ರೊಳಗೆ ಪ್ರವೇಶ ಪಡೆಯಲಿದೆ ಎನ್ನುವುದು ಹವಾಮಾನ ಇಲಾಖೆಯ ಲೆಕ್ಕಚಾರ. ಜೂನ್ 8ರ ಬಳಿಕ ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿಯೊಂದಿಗೆ ವಾಯುಭಾರ ಕುಸಿತವಾಗುವ ಸಾಧ್ಯತೆ ಇದೆ. ವಾಯಭಾರ ಕುಸಿತವಾದರೆ ಸಮಸ್ಯೆಯಾಗುವುದಿಲ್ಲ. ರಾಜ್ಯದಲ್ಲಿ ಈ ಬಾರಿಯೇ ಮುಂಗಾರು ಪ್ರವೇಶ ವಿಳಂಬವಾಗುತ್ತಿದೆ. 2016ರಲ್ಲಿಇಲಾಖೆಯ ಪ್ರಕಾರ ಜೂನ್ 7ಕ್ಕೆ ಮುಂಗಾರು ಬರಬೇಕಿತ್ತು. ಜೂನ್ 8ಕ್ಕೆ ರಾಜ್ಯಕ್ಕೆ ಬಂದಿತ್ತು.
2017ರಲ್ಲಿ ಮೇ 30ಕ್ಕೆ ನಿರೀಕ್ಷೆ ಮಾಡಿದಂತೆ ರಾಜ್ಯಕ್ಕೆ ಬಂದಿದೆ. 2018ರಲ್ಲೂ ಮೇ 29ಕ್ಕೆ ನಿರೀಕ್ಷೆ ಮಾಡಿ ಅದೇ ದಿನ ಮುಂಗಾರು ಬಂದಿದೆ. 2019ರಲ್ಲಿ ಜೂನ್ 6ಕ್ಕೆ ನಿರೀಕ್ಷೆ ಮಾಡಿದ್ದು, ಜೂನ್ 8ಕ್ಕೆ ಬಂದಿದೆ. 2020ರಲ್ಲಿ ಜೂನ್ 5ಕ್ಕೆ ನಿರೀಕ್ಷೆ ಮಾಡಿದ್ದು ಜೂನ್ 1ಕ್ಕೆ ಮುಂಗಾರು ರಾಜ್ಯಕ್ಕೆ ಪ್ರವೇಶ ಪಡೆದುಕೊಂಡಿದೆ. ಆದರೆ ಈ ಬಾರಿ ಮುಂಗಾರು ರಾಜ್ಯ ಪ್ರವೇಶ ಮತ್ತಷ್ಟು ತಡವಾಗುತ್ತಿದೆ. ಮುಂಗಾರು ರಾಜ್ಯದಲ್ಲಿ ಬಂದರೂ ಕೂಡ ಆರಂಭಿಕ ವೇಗದಲ್ಲಿ ಅಷ್ಟೊಂದು ಚುರುಕುತನ ಇಲ್ಲದಿರಬಹುದು. ಆದರೆ, ಜೂನ್ ಎರಡನೇ ವಾರದಲ್ಲಿ ವೇಗ ಪಡೆಯಬಹುದು ಎನ್ನಲಾಗುತ್ತಿದೆ.








