ಮಂಡ್ಯ : ಮೈಶುಗರ್ ಸಕ್ಕರೆ ಕಾರ್ಖಾನೆಯನ್ನು ಸರ್ಕಾರದಿಂದ ಆರಂಭಿಸಲು ಆಗ್ರಹಿಸಿ ಮಂಡ್ಯದಲ್ಲಿ ರೈತರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿನ್ನೆಲೆ ಸಂಸದೆ ಸುಮಲತಾ ಅಂಬರೀಶ್ ಅವರು ಇಂದು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ಕಾರ್ಖಾನೆಯನ್ನು ಖಾಸಗಿಯವರಿಗೆ ಕೊಟ್ಟು ಆರಂಭ ಮಾಡುವುದು ಬೇಡ ಎಂದು ಕೆಲವರು ಪ್ರತಿಭಟನೆ ಮಾಡುತ್ತಿದ್ದಾರೆ. ಇಷ್ಟು ವರ್ಷ ಕಾರ್ಖಾನೆ ಸ್ಥಗಿತಗೊಂಡಿತ್ತಲ್ಲ ಪ್ರತಿಭಟನೆ ಏಕೆ ಮಾಡಲಿಲ್ಲ..? ಅವಾಗಿಲ್ಲದ ನಿಮ್ಮ ರೋಷಾ-ವೇಷ ಹೀಗೇಕೆ..? ಎಂದು ಪ್ರತಿಭಟನಕಾರರಿಗೆ ಪ್ರಶ್ನೆ ಮಾಡಿದರು.
ಇದೇ ವೇಳೆ ಜಿಲ್ಲೆ ಜೆಡಿಎಸ್ ಶಾಸಕರ ವಿರುದ್ಧ ಕಿಡಿಕಾರಿದ ಸುಮಲತಾ, ಜಿಲ್ಲೆಯ ಶಾಸಕರು ಓ ಅಂಡ್ ಎಂ ಮೂಲಕ ಕಾರ್ಖಾನೆ ತೆರೆಯಲು ವಿರೋಧಿಸುತ್ತಿದ್ದಾರೆ. ಖಾಸಗೀಕರಣ ಮಾಡಿ ಕಾರ್ಖಾನೆ ತೆರೆದರೆ ಉಗ್ರ ಹೋರಾಟ ಮಾಡುವ ಎಚ್ಚರಿಕೆ ಕೊಡುತ್ತಾರೆ. ನಿಮ್ಮದು ಉಗ್ರ ಹೋರಾಟವಲ್ಲ. ಸ್ವಾರ್ಥ ರಾಜಕಾರಣ. ಉಗ್ರ ಹೋರಾಟ ಮಾಡುತ್ತಿರೋರು ಭಾರತ-ಚೀನಾ ಗಡಿಯಲ್ಲಿ ನಮ್ಮ ಸೈನಿಕರು. ಉಗ್ರ ಹೋರಾಟ ಎನ್ನಲು ನಿಮಗ್ಯಾವ ನೈತಿಕತೆ ಇದೆ. ಸದ್ಯ ಈಗ ಯಾವ ಚುನಾವಣೆ ಸಹ ಇಲ್ಲ. ಆಗಿದ್ದರೂ ಕಾರ್ಖಾನೆ ತೆರೆಯಲು ನೀವು ಬಿಡುತ್ತಿಲ್ಲ. ನಿಮಗೇಕೆ ಈ ವಿಚಾರದಲ್ಲಿ ಆತಂಕ ಎಂದು ವಾಗ್ದಾಳಿ ನಡೆಸಿದರು.








