ಮಲಯಾಳಂ ನಿರ್ದೇಶಕ ಕೆ.ಆರ್.ಸಚ್ಚಿದಾನಂದ್ ಇನ್ನಿಲ್ಲ
ತ್ರಿಶೂರ್, ಜೂನ್ 19: ಮಲಯಾಳಂ ಚಿತ್ರರಂಗದ ನಿರ್ದೇಶಕ ಕೆ.ಆರ್.ಸಚ್ಚಿದಾನಂದ್ ಅಲಿಯಾಸ್ ಸಚ್ಚಿ ಜೂನ್ 18ರಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಕೆಲವು ದಿನಗಳ ಹಿಂದೆ ಹೃದಯಾಘಾತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಸಚ್ಚಿದಾನಂದ್ ಚಿಕಿತ್ಸೆಗೆ ಸ್ಪಂದಿಸದೆ ನಿಧನರಾಗಿದ್ದಾರೆ. ನಿನ್ನೆ ಮತ್ತೊಮ್ಮೆ ಅವರು ಹೃದಯ ಸ್ತಂಭನಕ್ಕೆ ಒಳಗಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ತ್ರಿಶೂರ್ ಆಸ್ಪತ್ರೆ ಮೂಲಗಳು ತಿಳಿಸಿವೆ.
48 ವರ್ಷ ಪ್ರಾಯದ ಸಚ್ಚಿದಾನಂದ್ ತ್ರಿಶೂರಿನ ಜ್ಯುಬಿಲಿ ಮಿಷನ್ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಕೆಲವು ದಿನಗಳ ಹಿಂದೆ ಸೊಂಟದ ಭಾಗದ ದೊಡ್ಡ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಅವರು ನಂತರ ಚೇತರಿಸಿಕೊಳ್ಳಲಿಲ್ಲ ಎಂದು ಹೇಳಲಾಗಿದೆ. ಮೆದುಳಿಗೆ ಆಮ್ಲಜನಕ ಪೂರೈಕೆ ಸ್ಥಗಿತವಾಗಿ ಕಳೆದೆರಡು ದಿನಗಳಿಂದ ವೆಂಟಿಲೇಟರ್ ನೆರವಿನಲ್ಲಿ ಉಸಿರಾಟ ನಡೆಸುತ್ತಿದ್ದರು.
ಅನೇಕ ಉತ್ತಮ ಚಿತ್ರಗಳನ್ನು ನಿರ್ದೇಶಿಸಿರುವ ಸಚ್ಚಿದಾನಂದ್ ಅಯ್ಯಪ್ಪನುಂ-ಕೋಶಿಯುಂ ಎಂಬ ಸೂಪರ್ ಹಿಟ್ ಚಿತ್ರ, ಅನಾರ್ಕಲಿ ಎಂಬ ಪ್ರೇಮ ಕಥೆಯ ಚಿತ್ರ, ಡ್ರೈವಿಂಗ್ ಲೈಸನ್ಸ್ ಎಂಬ ಸಮಾಜಕ್ಕೆ ಸಂದೇಶ ಸಾರುವ ಚಿತ್ರಗಳನ್ನು ನಿರ್ದೇಶಿಸಿದ್ದರು. ಸಚ್ಚಿ ನಿರ್ದೇಶನದ ಅಯ್ಯಪ್ಪನುಂ-ಕೋಶಿಯುಂ ಚಿತ್ರವು ಹಿಂದಿ, ತೆಲುಗು, ತಮಿಳು ಭಾಷೆಗಳಲ್ಲಿ ರೀಮೇಕ್ ಆಗುತ್ತಿದ್ದು, ಕನ್ನಡದಲ್ಲಿಯೂ ಸಿನಿಮಾವನ್ನು ರೀಮೇಕ್ ಮಾಡುವ ಸಾಧ್ಯತೆ ಇದೆ.