ಮನೆಯ ಮುಂಭಾಗದಲ್ಲಿ ಆಟವಾಡುತ್ತಿದ್ದ ವಿದ್ಯಾರ್ಥಿನಿಯ ಮೇಲೆ ಚಿರತೆ ದಾಳಿ ನಡೆಸಿದ್ದು, ಬಾಲಕಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಈ ಘಟನೆ ಹನೂರು ತಾಲೂಕಿನ ಕಗ್ಗಲಿಗುಂದಿ ಗ್ರಾಮದಲ್ಲಿ ಸೋಮವಾರ ರಾತ್ರಿ 9ಕ್ಕೆ ನಡೆದಿದೆ. ಗ್ರಾಮದ ಸುಶೀಲ (6) ತೀವ್ರ ಗಾಯಗೊಂಡಿರುವ ವಿದ್ಯಾರ್ಥಿನಿ ಎನ್ನಲಾಗಿದೆ. ಮನೆಯ ಮುಂಭಾಗ ಆಟವಾಡುತ್ತಿದ್ದ ಸಂದರ್ಭದಲ್ಲಿ ಚಿರತೆಯೊಂದು ಏಕಾಏಕಿ ದಾಳಿ ನಡೆಸಿ ಮಗುವನ್ನು ಸುಮಾರು 200 ಮೀಟರ್ ದೂರಕ್ಕೆ ಎಳೆದೊಯ್ದಿದೆ.
ಚಿರತೆ ದಾಳಿಗೆ ಒಳಗಾಗಿದ್ದ ಮಗುವಿನ ಚಿರಾಟ ಕೇಳಿದ ಪೋಷಕರು ಹಾಗೂ ಗ್ರಾಮಸ್ಥರು ಕಳ್ಳರು ಬಂದಿದ್ದಾರೆ, ಮಗುವನ್ನು ಕರೆದುಕೊಂಡು ಹೋಗುತ್ತಿದ್ದಾರೆ ಎಂದು ದೊಣ್ಣೆಗಳನ್ನು ಎತ್ತಿಕೊಂಡು ಹೋಗಿದ್ದಾರೆ. ಆದರೆ ಗ್ರಾಮಸ್ಥರ ಸದ್ದಿಗೆ ಚಿರತೆ ಮಗುವನ್ನು ಬಿಟ್ಟು ಕಾಡಿನತ್ತ ತೆರಳಿದೆ. ಅಷ್ಟರಲ್ಲಾಗಲೇ ಚಿರತೆ ಮಗುವಿನ ರಕ್ತವನ್ನು ಕುಡಿದು ಗಾಯಗೊಳಿಸಿದೆ. ಗ್ರಾಮಸ್ಥರು ಕೂಡಲೇ 108 ಆಂಬುಲೆನ್ಸ್ ಸಿಬ್ಬಂದಿ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ತುರ್ತು ವೈದ್ಯಕೀಯ ಸಿಬ್ಬಂದಿ ಮೂರ್ತಿ ಹಾಗೂ ಚಾಲಕ ಲಿಂಗರಾಜು ಗಾಯಗೊಂಡ ಬಾಲಕಿಗೆ ಪ್ರಥಮ ಚಿಕಿತ್ಸೆ ನೀಡಿ ಕಾಮಗೆರೆ ಹೋಲಿ ಕ್ರಾಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.








