ಬೆಂಗಳೂರಿನ ಮಲ್ಲೇಶ್ವರಂನ ವೈಯ್ಯಾಲಿಕಾವಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೇಳಿದಷ್ಟು ಹಣ ನೀಡದಿದ್ದಕ್ಕೆ ಮಂಗಳಮುಖಿಯರು ಬಟ್ಟೆ ಬಿಚ್ಚಿ ಅಸಭ್ಯ ವಸ್ತನೆ ತೋರಿರುವ ಘಟನೆ ನಡೆದಿದೆ.
ಕನಸಿನ ಮನೆ ಕಟ್ಟಿ ಗೃಹ ಪ್ರವೇಶ ಮಾಡುವಾಗಲೇ ಎಂಟ್ರಿ ಕೊಟ್ಟಿದ್ದ ಮೂವರು ಮಂಗಳಮುಖಿಯರು ಹೆಚ್ಚು ಹಣ ನೀಡುವಂತೆ ಪೀಡಿಸಿ ಅಸಭ್ಯವಾಗಿ ವರ್ತಿಸಿದ್ದಾರೆ. ಇಂದು ರಾಜೇಶ್- ದೀಪಾ ದಂಪತಿ ಗೃಹಪ್ರ ವೇಶ ಕಾರ್ಯಕ್ರಮ ಇಟ್ಟುಕೊಂಡಿದ್ದರು. ಪೂಜೆ ನಡೆಯುವಾಗ ಮಧ್ಯಾಹ್ನ 3 ಗಂಟೆಗೆ ಓರ್ವ ಮಂಗಳಮುಖಿ ಬಂದು ಹಣ ಕೇಳಿದ್ದಾಳೆ. ಮಾಲೀಕರು 200 ರೂ. ಕೊಟ್ಟಿದ್ದಕ್ಕೆ ಇದು ಸಾಲುವುದಿಲ್ಲ ಎಂದು ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.
ಇವರ ಕಾಟಕ್ಕೆ ಬೇಸತ್ತ ಕುಟುಂಬಸ್ಥರು 5 ಸಾವಿರ ಹಣ ನೀಡಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಮಂಗಳಮುಖಿಯರು ಒಬ್ಬಬ್ಬರಿಗೆ 5 ಸಾವಿರ ರೂ. ನಂತೆ ಒಟ್ಟು 15 ಸಾವಿರ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಹೀಗಾಗಿ ಸಂಬಂಧಿಕರು ಹಾಗೂ ಮಂಗಳಮುಖಿಯರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಆಗ ಮಂಗಳಮುಖಿಯರು ಧರಿಸಿದ್ದ ಬಟ್ಟೆ ಎತ್ತಿ ಅನುಚಿತ ವರ್ತನೆ ತೋರಿಸಿದ್ದಾರೆ ಎಂದು ಮಾಲೀಕರು ಆರೋಪಿಸಿದ್ದಾರೆ.








