ಕಾರವಾರ: ಮದುವೆಯಾಗಲು ಹೆಣ್ಣು ಸಿಗದಿರುವ ವಿಷಯಕ್ಕೆ ಮನನೊಂದ ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆಯೊಂದು ಜಿಲ್ಲೆಯಲ್ಲಿ ನಡೆದಿದೆ.
ಯಲ್ಲಾಪುರದ ತೇಲಂಗಾರ ಕಿರಗಾರಿಮನೆ ನಿವಾಸಿ ನಾಗರಾಜ ಗಣಪತಿ ಗಾಂವ್ಕರ (35) ಸಾವನ್ನಪ್ಪಿದ ಯುವಕ. ಈತ ಕೃಷಿ (Agriculture) ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಎಲ್ಲರಂತೆಯೇ ತಾನೂ ಮದುವೆಯ ಕನಸು ಕಂಡಿದ್ದ. ಹೀಗಾಗಿ ಮದುವೆಗಾಗಿ ಹೆಣ್ಣು ಹುಡುಕುತ್ತಿದ್ದ. ಸಂಬಂಧಿಕರು, ಬ್ರೋಕರ್ ಗಳ ಬಳಿ ಹೆಣ್ಣು (Girl For Marriage) ಹುಡುಕಿಕೊಡಲು ಹೇಳುತ್ತಿದ್ದ. ಆದರೆ ಎಲ್ಲಿಯೂ ನಾಗರಾಜ್‍ಗೆ ಹೆಣ್ಣು ಸಿಗುತ್ತಿರಲಿಲ್ಲ.
ಏಕೆ ಹೆಣ್ಣು ಸಿಗುತ್ತಿಲ್ಲ ಎಂದು ನಾಗರಾಜ್ ಪ್ರತಿದಿನ ಚಿಂತೆ ಮಾಡುತ್ತಿದ್ದ. ಹೀಗಾಗಿ ಖಿನ್ನತೆಗೆ ಒಳಗಾಗಿದ್ದ ನಾಗರಾಜ್ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಮಾಡಿದ್ದಾನೆ. ತನ್ನ ಮನೆಯ ಸಮೀಪದ ಗುಡ್ಡಕ್ಕೆ ತೆರಳಿ ಮರವೊಂದಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದ್ದು, ಸ್ಥಳಕ್ಕೆ ಯಲ್ಲಾಪುರ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.








