ಹೈದರಾಬಾದ್ : 10ನೇ ಶತಮಾನದ ಜೈನ ತೀರ್ಥಂಕರರ ಶಿಲ್ಪಗಳು ಮತ್ತು ಶಾಸನಗಳನ್ನು ಹೊಂದಿರುವ ಎರಡು ಚೌಕಾಕಾರದ ಕಂಬಗಳು ತೆಲಂಗಾಣದಲ್ಲಿ ಪತ್ತೆಯಾಗಿವೆ.
ಹೈದರಾಬಾದ್ನ ಹೊರವಲಯದ ಹಳ್ಳಿಯೊಂದರಲ್ಲಿ ಪತ್ತೆಯಾಗಿದ್ದು, ಖ್ಯಾತ ಪುರಾತತ್ವಶಾಸ್ತ್ರಜ್ಞ ಇ. ಶಿವನಾಗಿ ರೆಡ್ಡಿ ಅವರು ಸ್ಥಳ ಪರಿಶೀಲಿಸಿದರು. ಎರಡು ಸ್ತಂಭದಲ್ಲಿ ಒಂದು ಗ್ರಾನೈಟ್ ನದ್ದು ಮತ್ತು ಇನ್ನೊಂದು ಕಪ್ಪು ಬಸಾಲ್ಟ್ ನದ್ದಾಗಿದೆ. ಇವು ನಾಲ್ಕು ಜೈನ ತೀರ್ಥಂಕರರನ್ನು ಹೊಂದಿವೆ. ಅವರೆಂದರೆ ಆದಿನಾಥ, ನೇಮಿನಾಥ, ಪಾರ್ಶ್ವನಾಥ ಮತ್ತು ವರ್ಧಮಾನ ಮಹಾವೀರರದ್ದು ಎನ್ನಲಾಗಿದೆ. ಕಂಬದ ನಾಲ್ಕೂ ಬದಿಗಳಲ್ಲಿ ಒಬ್ಬೊಬ್ಬರು ಧ್ಯಾನದಲ್ಲಿ ಕುಳಿತಿದ್ದಾರೆ ಮತ್ತು ಮೇಲ್ಭಾಗದಲ್ಲಿ ’ಕೀರ್ತಿಮುಖ’ಗಳಿಂದ ಅಲಂಕರಿಸಲಾಗಿದೆ ಎಂದು ಶಿವನಾಗಿ ರೆಡ್ಡಿ ಹೇಳಿದ್ದಾರೆ.
ಎರಡೂ ಸ್ಲಾಬ್ಗಳ ಮೇಲೆ ತೆಲುಗು – ಕನ್ನಡ ಲಿಪಿಯಲ್ಲಿ ಶಾಸನಗಳಿವೆ. ಆದರೆ ಅವುಗಳನ್ನು ಗ್ರಾಮದ ತೊಟ್ಟಿಯ ತೂಬಿನ ಗೋಡೆಗಳಲ್ಲಿ ಅಳವಡಿಸಿರುವುದರಿಂದ ಅರ್ಥೈಸಲು ಸಾಧ್ಯವಾಗುತ್ತಿಲ್ಲ. ತೂಬಿನಿಂದ ಕಲ್ಲಿನ ಸ್ಲಾಬ್ಗಳನ್ನು ಹೊರತೆಗೆದಾಗ ನಿಖರ ಮಾಹಿತಿ ಲಭ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ. ಶಾಸನವೊಂದರ ಕೆಲ ಭಾಗ ಗೋಚರಿಸುತ್ತಿದ್ದು, ಅದು ರಾಷ್ಟ್ರಕೂಟ ಮತ್ತು ವೇಮುಲವಾಡ ಚಾಲುಕ್ಯರ ಕಾಲದಲ್ಲಿ (9ನೇ – 10ನೇ ಶತಮಾನ) ಪ್ರಮುಖ ಜೈನ ಕೇಂದ್ರವಾಗಿದ್ದ ಮಂಡಲದ ಚಿಲುಕೂರು ಗ್ರಾಮದ ಸಮೀಪದಲ್ಲಿರುವ ’ಜನಿನ ಬಸದಿ’ಯನ್ನು (ಮಠವನ್ನು) ಉಲ್ಲೇಖಿಸುತ್ತದೆ ಎದಿದ್ದಾರೆ.








