ಪ್ರೀತಿ ಮಾಡುವಂತೆ ಶಿಕ್ಷಕಿಯ ಮಗ ಕಿರುಕುಳ ನೀಡಿದ್ದಕ್ಕೆ ಎಸ್ಸೆಸ್ಸೆಲ್ಸಿ ಓದುತ್ತಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಹೊಸಕೋಟೆಯ ಪಾರ್ವತಿಪುರದಲ್ಲಿ ನಡೆದಿದೆ. ಸಾರಾ(16) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಮಗಳ ಸಾವಿಗೆ ಶಿಕ್ಷಕಿ ಹಾಗೂ ಇತರರು ಕಾರಣ ಎಂದು ಹೊಸಕೋಟೆ ಠಾಣೆಗೆ ಮೃತ ವಿದ್ಯಾರ್ಥಿನಿ ಪೋಷಕರು ದೂರು ನೀಡಿದ್ದಾರೆ.
ಸದ್ಯ ಶಿಕ್ಷಕಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಹೊಸಕೋಟೆಯ ಖಾಸಗಿ ಶಾಲೆಯಲ್ಲಿ ಮೃತ ಸಾರಾ ಓದುತ್ತಿದ್ದಳು. ಲವ್ ಮಾಡಲು ಒಪ್ಪದ ಕಾರಣಕ್ಕೆ ಶಿಕ್ಷಕಿಯ ಮಗನಿಂದ ಲವ್ ಮಾಡುವಂತೆ ಕಿರುಕುಳ ನೀಡಲಾಗಿದೆ. ಬಾಲಕಿಯ ಸಾವಿನ ನಂತರ ಶಿಕ್ಷಕಿಯು ಎಲ್ಲ ವಿದ್ಯಾರ್ಥಿನಿಯರಿಗೂ ಹೆದರಿಸಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. ಬಾಲಕಿ ಮೃತಪಟ್ಟು ವಾರದ ನಂತರ ಮೃತ ಸಾರಾ ಪೋಷಕರಿಗೆ ಸಹಪಾಠಿಗಳು ವಿಷಯ ತಿಳಿಸಿದ್ದಾರೆ. ಮಗಳ ಸಾವಿಗೆ ನ್ಯಾಯ ಕೊಡಿಸುವಂತೆ ಪೋಷಕರು ಮನವಿ ಮಾಡುತ್ತಿದ್ದಾರೆ.








