ಕೇಪ್ ಟೌನ್ : ವಿಷಾನಿಲ ಸೋರಿಕೆಯಿಂದಾಗಿ (Gas Leak) ಕನಿಷ್ಠ 16 ಜನರು ಸಾವನ್ನಪ್ಪಿರುವ ಘಟನೆ ದಕ್ಷಿಣ ಆಫ್ರಿಕಾದ (South Africa) ಜೋಹನ್ಸ್‌ಬರ್ಗ್‌ನ ಬೋಕ್ಸ್‌ಬರ್ಗ್ ಬಳಿ ನಡೆದಿದೆ.
ಅಕ್ರಮ ಗಣಿಗಾರಿಕೆ ಚಟುವಟಿಕೆಗಳಿಂದಾಗಿ ಈ ಅನಿಲ ಸೋರಿಕೆ ಪ್ರಕರಣ ಬೆಳಕಿಗೆ ಬಂದಿದೆ ಎಂದು ದಕ್ಷಿಣ ಆಫ್ರಿಕಾದ ಮಾಧ್ಯಮಗಳು ವರದಿ ಮಾಡಿವೆ. ಘಟನೆಯಲ್ಲಿ 1 ವರ್ಷದ ಮಗು ಸೇರಿದಂತೆ 16 ಜನರು ಸಾವನ್ನಪ್ಪಿದ್ದಾರೆ. ಅನಿಲ ಸೋರಿಕೆಯಿಂದಾಗಿ ಮೃತದೇಹಗಳು ಚೆಲ್ಲಾಪಿಲ್ಲಿಯಾಗಿವೆ ಎಂದು ತಿಳಿದು ಬಂದಿದೆ.
ದುರಂತದಲ್ಲಿ 24 ಜನರು ಸಾವನ್ನಪ್ಪಿದ್ದಾರೆ ಎಂದು ಮೊದಲಿಗೆ ವರದಿಯಾಗಿತ್ತು. ನಂತರ ರಕ್ಷಣಾ ತಂಡ ಮೃತದೇಹಗಳನ್ನು ಮರು ಎಣಿಕೆ ಮಾಡಿದ್ದು, ಮೃತರ ಸಂಖ್ಯೆಯನ್ನು 16 ಜನರು ಎಂಬುವುದನ್ನು ಈಗಾಗಲೇ ಖಚಿತಪಡಿಸಲಾಗಿದೆ. ಅನಿಲ ಸೋರಿಕೆ ಸದ್ಯ ನಿಂತಿದ್ದು, 100 ಮೀ. ಆಸುಪಾಸಿನಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.








