ಬೆಂಗಳೂರು : ಇಂದು ವಿಧಾನಸಭೆಯಲ್ಲಿ ನಡೆದ ಹೈಡ್ರಾಮಾದ ಸಂದರ್ಭದಲ್ಲಿ ಅಸ್ವಸ್ಥರಾಗಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal Health) ಅವರ ಆರೋಗ್ಯದಲ್ಲಿ ಸ್ಥಿರವಾಗಿದೆ ಎಂದು ಸ್ವತಃ ಅವರೇ ಹೇಳಿದ್ದು, ಆತಂಕ ಪಡಬೇಡಿ ಎಂದು ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಆರೋಗ್ಯ ಸ್ಥಿರವಾಗಿದೆ. ಸಂಪೂರ್ಣ ಗುಣಮುಖನಾಗಿದ್ದೆನೆ ಯಾರೂ ಭಯಪಡುವ ಅವಶ್ಯಕತೆಯಿಲ್ಲ ಜೈ ಶ್ರೀರಾಮ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ, ಅವರ ಆರೋಗ್ಯದ ಬಗ್ಗೆ ಮಾತನಾಡಿದ ವೈದ್ಯ ಅಬ್ದುಲ್ ಖಾದರ್, ಎಮರ್ಜೆನ್ಸಿ ವೈದ್ಯ ನಾನು. ತಲೆ ಸುತ್ತು ಅಂತ ಎಮರ್ಜೆನ್ಸಿಗೆ ಬಸವನಗೌಡ ಪಾಟೀಲ್ ಯತ್ನಾಳ್ ಬಂದಿದ್ದರು. ಇಸಿಜಿ, ಎಕೋ ನಾರ್ಮಲ್ ಇದೆ. ಕಾರ್ಡಿಯಲಾಜಿಸ್ಟ್ ನೋಡಿದ್ದಾರೆ. ನಾರ್ಮಲ್ ಆಗಿದ್ದಾರೆ. 24 ಗಂಟೆ ನಿಗಾದಲ್ಲಿರಬೇಕು. ಬಿಪಿ ಹೆಚ್ಚಿದೆ. ಚಿಕಿತ್ಸೆ ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಸ್ಪೀಕರ್ ಸ್ಥಾನಕ್ಕೆ ಅಗೌರವ ತೋರಿದ ಹಿನ್ನೆಲೆ ಸ್ಪೀಕರ್ ಯುಟಿ ಖಾದರ್, 10 ಬಿಜೆಪಿ ಶಾಸಕರನ್ನು ಅಮಾನತು ಮಾಡಿದ್ದಾರೆ. ಸಸ್ಪೆಂಡ್ ಆದ ಬಳಿಕವೂ ಬಿಜೆಪಿ ಸದಸ್ಯರು ಸದನದೊಳಗೆ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಅಹಿತಕರ ಘಟನೆ ನಡೆದಿತ್ತು.