ಚಾರ್ಮಾಡಿ ಘಾಟಿನಲ್ಲಿ ಪ್ರವಾಸಿಗರ ಸೆಲ್ಫಿ ಗೀಳು
ಚಿಕ್ಕಮಗಳೂರು, ಜೂನ್ 19: ಚಿಕ್ಕಮಗಳೂರು-ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟಿನಲ್ಲಿ ಪ್ರವಾಸಿಗರ ಸೆಲ್ಫಿ ಗೀಳು ಮಿತಿಮೀರಿದೆ.
ಚಾರ್ಮಾಡಿ ಘಾಟಿನಲ್ಲಿ ಜನರ ಸೆಲ್ಫಿ ಗೀಳಿನಿಂದಾಗಿ ಕೆಲವು ವರ್ಷಗಳಿಂದ ಅನೇಕ ಸಾವು ನೋವು ಸಂಭವಿಸಿದ ಹಿನ್ನಲೆಯಲ್ಲಿ ಸರ್ಕಾರ ಸೆಲ್ಫಿ ತೆಗೆದುಕೊಳ್ಳುವುದನ್ನು ನಿಷೇಧಿಸಿದೆ. ಆದರೆ ಸರ್ಕಾರದ ಆದೇಶವನ್ನು ಧಿಕ್ಕರಿಸಿ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿನಲ್ಲಿ ಪ್ರವಾಸಿಗರ ಸೆಲ್ಫಿ ಗೀಳು ಮುಂದುವರೆದಿದೆ.
ಈಗಾಗಲೇ ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂಗಾರು ಮಳೆ ಪ್ರಾರಂಭಗೊಂಡಿದ್ದು, ಚಾರ್ಮಾಡಿಯಲ್ಲಿ ಜೋರಾಗಿ ಮಳೆ ಸುರಿಯುತ್ತಿದೆ. ಇದರಿಂದಾಗಿ ಚಾರ್ಮಾಡಿಯ ಅಲ್ಲಲ್ಲಿ ಸಣ್ಣ ಸಣ್ಣ ಜಲಪಾತಗಳು ಸೃಷ್ಟಿಯಾಗಿದ್ದು ನೋಡಲು ಮನಮೋಹಕವಾಗಿದೆ.
ಆದರೆ ಪ್ರವಾಸಿಗರು ಚಾರ್ಮಾಡಿ ಘಾಟಿಯ ಬಂಡೆಗಳ ಮೇಲೆ ಹತ್ತಿ, ನಿಂತು ಫೋಟೋ ತೆಗೆಯುವುದರಲ್ಲಿ ನಿರತರಾಗಿದ್ದಾರೆ. ಇದು ಬಹಳ ಅಪಾಯಕಾರಿಯಾಗಿದ್ದು, ಕಳೆದ ಎರಡು ಮೂರು ವರ್ಷಗಳಲ್ಲಿ ಅನೇಕ ಸಾವು ನೋವುಗಳು ಸಂಭವಿಸಿದೆ. ಕಳೆದ ವರ್ಷ ಕೂಡ ಪ್ರವಾಸಿಗರೊಬ್ಬರು ನಿಷೇಧದ ನಡುವೆಯೂ ಬಂಡೆಯ ಮೇಲೆ ಹತ್ತಿ ಫೋಟೋ ತೆಗೆಯುವಾಗ ಜಾರಿ ಬಿದ್ದು ಕೈ ಮುರಿದುಕೊಂಡಿದ್ದರು. ಆದರೂ ಈ ದಾರಿಯಲ್ಲಿ ಪ್ರಯಾಣ ಬೆಳೆಸುವ ಪ್ರಯಾಣಿಕರು ಮಾತ್ರ ಇನ್ನೂ ಬುದ್ಧಿ ಕಲಿತಿಲ್ಲ.
ಸರ್ಕಾರ ಇಲ್ಲಿ ಸೆಲ್ಫಿ ತೆಗೆದುಕೊಳ್ಳುವುದನ್ನು ನಿಷೇಧಿಸಿದ್ದರೂ ಪ್ರಯಾಣಿಕರು ಮಾತ್ರ ಬೆಟ್ಟ ಹತ್ತಿ ಸೆಲ್ಫಿ ತೆಗೆದುಕೊಳ್ಳಲು ಮುಗಿಬೀಳುತ್ತಿದ್ದಾರೆ. ಇಲ್ಲಿನ ಸ್ಥಳೀಯರು ಅಪಾಯಕಾರಿಯಾದ ಈ ಸ್ಥಳದಲ್ಲಿ ಸೆಲ್ಫಿ ತೆಗೆಯದಂತೆ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.