ಬೆಂಗಳೂರು: ರಾಜ್ಯದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದ್ದು, ಹಳ್ಳ-ಕೊಳ್ಳಗಳು, ನದಿಗಳು ತುಂಬಿ ಹರಿಯುತ್ತಿವೆ. ಬತ್ತಿ ಹೋಗಿದ್ದ ನದಿಗಳಿಗೆ ಕಳೆ ಬಂದಿದ್ದು, ಧುಮ್ಮಿಕ್ಕಿ ಹರಿಯುತ್ತಿವೆ. ಹಲವೆಡೆ ಸೇತುವೆಗಳು ಮುಳುಗಡೆಯಾಗಿದ್ದು, ಸಂಚಾರ ಬಂದ್ ಆಗಿವೆ. ಇದರ ಮಧ್ಯೆ ಹವಾಮಾನ ಇಲಾಖೆಯು ಮಳೆ ಇನ್ನೂ ಮುಂದುವರೆಯುವ ಸಾಧ್ಯತೆಯನ್ನು ಹೇಳಿದ್ದು, ರಾಜ್ಯದ 7 ಜಿಲ್ಲೆಗಳಲ್ಲಿನ ಶಾಲಾ-ಕಾಲೇಜುಗಳಿಗೆ ಗುರುವಾರ ಕೂಡ ರಜೆ ಘೋಷಿಸಲಾಗಿದೆ.
ವಿಜಯನಗರ, ಚಿಕ್ಕಮಗಳೂರು, ಉಡುಪಿ, ಮಂಗಳೂರು, ರಾಯಚೂರು, ಹಾಸನ ಜಿಲ್ಲೆಗಳಲ್ಲಿ ನಾಳೆ ಕೂಡ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ, ಕೂಡ್ಲಿಗಿ ಹರಪನಹಳ್ಳಿ ತಾಲೂಕಿನ ಶಾಲಾ ಕಾಲೇಜುಗಳಿಗೆ ನಾಳೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಆದೇಶಿಸಿದ್ದಾರೆ.
ರಾಯಚೂರು ಜಿಲ್ಲೆಯಾದ್ಯಂತ ಕಳೆದ ಒಂದು ವಾರದಿಂದ ಜಿಟಿ ಜಿಟಿ ಮಳೆ ಸುರಿಯುತ್ತಿದೆ. ಹಾಗಾಗಿ ಜಿಲ್ಲೆಯ ಶಾಲೆಗಳಿಗೆ ನಾಳೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಹಾಸನ ಜಿಲ್ಲೆಯ 8 ತಾಲೂಕಿನ ಅಂಗನವಾಡಿ, ಶಾಲೆಗಳಿಗೆ ರಜೆ ನಾಳೆ ಮತ್ತು ನಾಡಿದ್ದು ರಜೆ ಘೋಷಿಸಿ ಡಿಸಿ ಸತ್ಯಭಾಮಾ ಆದೇಶಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಅಂಗನವಾಡಿ, ಶಾಲೆಗಳು, ಅನುದಾನಿತ ಮತ್ತು ಖಾಸಗಿ ಶಾಲೆಗಳಿಗೆ ನಾಳೆ ರಜೆ ಘೋಷಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶಿಸಿದ್ದಾರೆ. ಆದರೆ, ಪದವಿಪೂರ್ವ, ಪದವಿ, ಐಟಿಐ, ಇಂಜಿನಿಯರಿಂಗ್ ಕಾಲೇಜುಗಳಿಗೆ ರಜೆ ಘೋಷಿಸಿಲ್ಲ.








