ರಾಹುಲ್ ಗಾಂಧಿ ಟೀಕೆಗೆ ಜೈಶಂಕರ್ ತಿರುಗೇಟು
ಜೂನ್ 19, ಹೊಸದಿಲ್ಲಿ: ಗಾಲ್ವಾನ್ ಗಡಿಯಲ್ಲಿ ಹುತಾತ್ಮರಾದ ಯೋಧರು ನಿರಾಯುಧರಾಗಿರಲಿಲ್ಲ, ಬದಲಾಗಿ 1996, 2005ರಲ್ಲಿ ಶಸ್ತ್ರಾಸ್ತ್ರ ಬಳಕೆ ಮಾಡಬಾರದು ಎಂಬ ಒಪ್ಪಂದದ ನಿಯಮಕ್ಕೆ ಅನುಸಾರವಾಗಿ ನಡೆದುಕೊಂಡರು ಎಂದು ವಿದೇಶಾಂಗ ಸಚಿವ ಜೈಶಂಕರ್ ರಾಹುಲ್ ಗಾಂಧಿಯವರಿಗೆ ತಿರುಗೇಟು ನೀಡಿದ್ದಾರೆ.

ಗಡಿಯಲ್ಲಿ ಸಂಘರ್ಷದ ವಾತಾವರಣವಿರುವಾಗ, ನಮ್ಮ ಸೈನಿಕರಿಗೆ ಶಸ್ತ್ರಾಸ್ತ್ರ ಕೊಡದೆ, ನಿರಾಯುಧರಾಗಿ ಕಾವಲು ಕಾಯಲು ನಿಯೋಜಿಸಿದ್ದು, ಎಷ್ಟರ ಮಟ್ಟಿಗೆ ಸರಿ, ಅವರನ್ನು ಹುತಾತ್ಮರಾಗಿಸಲು ಹಾಗೆ ಕಳುಹಿಸಲಾಯಿತೇ ಎಂದು ಈ ಮೊದಲು ರಾಹುಲ್ ಗಾಂಧಿ ಪ್ರಶ್ನಿಸಿದ್ದರು. ಅವರಿಗೆ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವ ಜೈಶಂಕರ್, ಭಾರತ ಚೀನಾ ಗಡಿಯಲ್ಲಿ ಕಾವಲು ಕಾಯುವ ಸೈನಿಕರು ಶಸ್ತ್ರಾಸ್ತ್ರಗಳನ್ನು ಹೊಂದಿರುತ್ತಾರೆ.

ಕಾವಲು ಕಾಯುವಾಗ ಉಭಯ ಕಡೆಯ ಸೈನಿಕರು ಶಸ್ತ್ರಾಸ್ತ್ರಗಳನ್ನು ಹೊಂದಿರುತ್ತಾರೆ. ಆದರೆ ಗಡಿರೇಖೆಯ ಅತಿ ಸಮೀಪದಲ್ಲಿ ಮುಖಾಮುಖಿಯಾಗುವ ಸಂದರ್ಭದಲ್ಲಿ ಶಸ್ತ್ರಾಸ್ತ್ರ ಹಿಡಿದಿರಬಾರದು ಎಂದು 1996 ಮತ್ತು 2005ರಲ್ಲಿ ಮಾಡಿರುವ ಒಪ್ಪಂದದಲ್ಲಿ ಉಲ್ಲೇಖಿಸಲಾಗಿದೆ. ಈ ಒಪ್ಪಂದಗಳಲ್ಲಿ ಸೂಚಿಸಿರುವ ನಿಯಮಗಳನ್ನು ತುಂಬಾ ವರ್ಷಗಳಿಂದಲೂ ಪಾಲಿಸಿಕೊಂಡು ಬರುತ್ತಿರುವ ಹಿನ್ನಲೆಯಲ್ಲಿ ಜೂನ್ 15 ರಂದು ಸಹ ಸೈನಿಕರು ಬರಿಗೈಯಲ್ಲಿ ಮುಖಾಮುಖಿಯಾಗಿ ನಿಂತಿದ್ದರು ಎಂದು ಉತ್ತರಿಸಿದ್ದಾರೆ.








