ಚಿಕ್ಕಮಗಳೂರು : ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಇನ್ನೋವಾ ಕಾರು 20 ಅಡಿ ಆಳಕ್ಕೆ ಬಿದ್ದ ಘಟನೆ ನಡೆದಿದ್ದು, ಈ ಘಟನೆ ಕಳಸ (Kalasa) ತಾಲೂಕಿನ ಕಲ್ಮಕ್ಕಿ ಗ್ರಾಮದಲ್ಲಿ ನಡೆದಿದೆ.
ಕಾರಿನಲ್ಲಿ ಮಗು ಸೇರಿದಂತೆ9 ಜನ ಕೋಲಾರ ಜಿಲ್ಲೆಯಿಂದ ಹೊರನಾಡು ಅನ್ನಪೂರ್ಣೇಶ್ವರಿ ದರ್ಶನಕ್ಕೆ (Horanadu Annapoorneshwari Temple) ಹೊರಟಿದ್ದರು. ಕಾರು ಕಳಸ ತಾಲೂಕಿನ ಕಲ್ಮಕ್ಕಿಗೆ ಬರುತ್ತಿದ್ದಂತೆ ರಸ್ತೆಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಬಿದ್ದಿದೆ.
20 ಅಡಿ ಎತ್ತರದಿಂದ ಬಿದ್ದ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಮನೆಯ ಮುಂಭಾಗಕ್ಕೆ ಬಿದ್ದ ಕಾರು ಮನೆ ಮೇಲೆ ಬಿದ್ದಿದ್ದರೆ ದೊಡ್ಡ ಅನಾಹುತವೇ ಸಂಭವಿಸುತ್ತಿತ್ತು. ಘಟನೆಯಲ್ಲಿ ಕಾರು ನಜ್ಜುಗುಜ್ಜಾಗಿ, ಸಾವು ಸಂಭವಿಸುವ ಮಟ್ಟಕ್ಕೂ ಅನಾಹುತವಾಗುತ್ತಿತ್ತು. ಕಾರು ಮನೆ ಮುಂಭಾಗ ಬಿದ್ದಿದ್ದರಿಂದ ಭಾರೀ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದಂತಾಗಿದೆ.
ಗಾಯಾಳುಗಳನ್ನು ಕಳಸ ಆಸ್ಪತ್ರೆಗೆ ದಾಖಲಿಸಿ, ಪ್ರಾಥಮಿಕ ಚಿಕಿತ್ಸೆಯ ನಂತರ ಎಲ್ಲರನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಎರಡು ಅಂಬುಲೆನ್ಸ್‌ನಲ್ಲಿ ಮಂಗಳೂರಿನ ವೆನ್‍ಲಾಕ್ ಆಸ್ಪತ್ರೆಗೆ ರವಾನಿಸಲಾಗಿದೆ. ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








