ಕಾವೇರಿ ನದಿಗೆ ‘ಕಾವೇರಿ’ Kaveri River ಹೆಸರು ಬಂದಿದ್ದು ಹೇಗೆ? ಇಲ್ಲಿದೆ ನೋಡಿ
ಹಿಂದೂ ಪುರಾಣಗಳಲ್ಲಿ ಪ್ರಾರ್ಥಿಸಲಾಗಿರುವ ಏಳು ಪುಣ್ಯನದಿಗಳಲ್ಲಿ ಕಾವೇರಿಯೂ ಒಂದು. ಭಾರತವೆಂದಾಕ್ಷಣ ಗಂಗಾ ನದಿಯನ್ನು ಹೇಗೆ ವರ್ಣಿಸಲಾಗುತ್ತದೆಯೋ ಹಾಗೆಯೇ ದಕ್ಷಿಣ ಭಾರತದಲ್ಲಿ ಕಾವೇರಿಯನ್ನು ಪುಣ್ಯ ನದಿಯನ್ನಾಗಿ ವರ್ಣಿಸಲಾಗಿದ್ದು ದಕ್ಷಿಣ ಗಂಗೆ ಎಂದೇ ಪ್ರತೀತಿ ಇದೆ.
ಕಾವೇರಿ ನದಿಯ ಬಗ್ಗೆ ಅಗ್ನಿಪುರಾಣದಲ್ಲಿ ಉಲ್ಲೇಖವಿದೆ. ಅಗ್ನಿ ಪುರಾಣದ ಪ್ರಕಾರ ಕವೇರ ಎಂಬ ರಾಜನಿಂದ ಈ ನದಿಗೆ ಕಾವೇರಿ ಎಂಬ ಹೆಸರು ಬಂದಿರುವುದು ತಿಳಿಯುತ್ತದೆ.
ಕವೇರ ರಾಜ ಬ್ರಹ್ಮನನ್ನು ಕುರಿತು ಕಠಿಣ ತಪಸ್ಸನ್ನಾಚರಿಸುತ್ತಾನೆ. ತಪಸ್ಸಿಗೆ ಮೆಚ್ಚಿದ ಬ್ರಹ್ಮ ಪ್ರತ್ಯಕ್ಷನಾಗುತ್ತಾನೆ. ನಂತರ ಕವೇರ ರಾಜ ನಿನ್ನ ಮೋಕ್ಷದ ಸಂಕಲ್ಪ ಈಡೇರುವುದಕ್ಕೂ ಮುನ್ನ ನನ್ನ ಮಗಳಾದ ವಿಷ್ಣುಮಾಯೆಯನ್ನು ನಿನ್ನ ಮಗಳಾಗಿಟ್ಟುಕೊಂಡು ಸಲಹಬೇಕೆಂದು ಬ್ರಹ್ಮ, ಕವೇರ ರಾಜನಿಗೆ ಹೇಳುತ್ತಾನೆ.
ಬ್ರಹ್ಮನ ಇಚ್ಛೆಯಂತೆ ಕವೇರ ರಾಜ ವಿಷ್ಣುಮಾಯೆಯನ್ನು ತನ್ನ ಅರಮನೆಯಲ್ಲಿ ಸಾಕುತ್ತಾನೆ. ವಿಷ್ಣುವಿನ ಅಂಶದವಳಾದ ವಿಷ್ಣುಮಾಯೆ ಬೆಳೆದು ದೊಡ್ಡವಳಾದ ಮೇಲೆ ತಪಸ್ಸು ಮಾಡಲು ಹಿಮಾಲಯ ಪರ್ವತಕ್ಕೆ ಹೋಗುತ್ತಾಳೆ. ನಂತರ ಕವೇರ ರಾಜನಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ.
ಇತ್ತ ಹಿಮಾಲಯದಲ್ಲಿ ವಿಷ್ಣುಮಾಯೆ ತಪಸ್ಸನ್ನು ಮೆಚ್ಚಿ ವಿಷ್ಣು ಪ್ರತ್ಯಕ್ಷನಾಗುತ್ತಾನೆ. ಆಗ ವಿಷ್ಣುಮಾಯೆ ಎರಡು ವರ ಕೇಳುತ್ತಾಳೆ. ಅದು ನಾನು ಎರಡು ರೂಪಗಳನ್ನು ತಾಳಬೇಕು.
ಒಂದು ರೂಪದಲ್ಲಿ ಅವಳು ಸಹ್ಯ ಪರ್ವತದಲ್ಲಿ ನದಿಯಾಗಿ ಹುಟ್ಟಿ ಹರಿಯುವಂತೆ ಮತ್ತು ಇನ್ನೊಂದು ರೂಪದಲ್ಲಿ ಲೋಪಾಮುದ್ರೆಯೆಂಬ ಹೆಸರು ತಳೆದು ಅಗಸ್ತ್ಯ ಋಷಿಯ ಪತ್ನಿಯಾಗುವಂತೆ ಬೇಡಿಕೊಂಡನು. ವಿಷ್ಣು ಅವಳಿಗೆ ವರ ನೀಡಿದ.
ಇದೆ ಸಮಯದಲ್ಲಿ ಅಗಸ್ತ್ಯ ಋಷಿ ಬ್ರಹ್ಮನನ್ನು ಕುರಿತು ತಪಸ್ಸು ಮಾಡುತ್ತಿದ್ದ. ಬ್ರಹ್ಮ ಪ್ರತ್ಯಕ್ಷನಾಗಿ, ಲೋಪಾಮುದ್ರೆಯನ್ನು ವಿವಾಹವಾಗುವಂತೆ ಋಷಿಗಳಿಗೆ ಹೇಳಿದ. ಬ್ರಹ್ಮನ ಅಣತಿಯಂತೆ ಅಗಸ್ತ್ಯರು ಲೋಪಾಮುದ್ರೆಯ ರೂಪ ತಳೆದಿದ್ದ ವಿಷ್ಣುಮಾಯೆಯನ್ನು ವಿವಾಹವಾದರು.
ಅಗಸ್ತ್ಯ ಲೋಪಾಮುದ್ರೆಯನ್ನು ವಿವಾಹವಾದ ಸ್ವಲ್ಪ ಸಮಯದ ಅನಂತರ ಅವರಿಗೆ ದಕ್ಷಿಣ ಭಾರತದಲ್ಲಿ ನೀರಿನ ಕೊರತೆಯಿದೆಯೆಂದು ತಿಳಿಯಿತು. ಲೋಪಾಮುದ್ರೆ ನೀರಿನ ರೂಪ ತಾಳಿ ತನ್ನ ಕಮಂಡಲದಲ್ಲಿರುಂತೆ ಅಗಸ್ತ್ಯರು ಕೇಳಿಕೊಳ್ಳುತ್ತಾರೆ. ಅಗಸ್ತ್ಯರ ಸೂಚನೆಯಂತೆ ಲೋಪಾಮುದ್ರೆ ನೀರಿನ ರೂಪ ತಾಳಿ ಅಗಸ್ತ್ಯರ ಕಮಂಡಲವನ್ನು ಸೇರುತ್ತಾಳೆ.
ಕಮಂಡಲವನ್ನು ಹಿಡಿದು ಸಹ್ಯ ಪರ್ವತಶ್ರೇಣಿಯ ಬ್ರಹ್ಮಗಿರಿಗೆ ಬಂದ ಅಗಸ್ತ್ಯರು ಕಮಂಡಲವನ್ನು ಕಲ್ಲಿನ ಮೇಲಿಟ್ಟು ಸ್ನಾನಕ್ಕಾಗಿ ಸ್ವಲ್ಪ ದೂರ ಹೋಗುತ್ತಾರೆ. ಅದೇ ಸಮಯದಲ್ಲಿ ಬಿರುಗಾಳಿ ಬೀಸಿ, ಕಲ್ಲಿನ ಮೇಲೆ ಇಟ್ಟಿದ್ದ ಕಮಂಡಲ ಮಗುಚಿಕೊಂಡಿತು. ಅ
ದರಲ್ಲಿದ್ದ ನೀರು ಹರಿದು ವಿರಜಾ ನದಿಯ ನೀರನ್ನು ಸೇರಿಕೊಂಡು ಕಾವೇರಿ ತೀರ್ಥಕುಂಡಿಗೆಯಿಂದ ನದಿಯಾಗಿ ಹರಿಯಿತು. ನದಿಯಾಗಿ ಹರಿದ ಲೋಪಾಮುದ್ರೆ ವಿಷ್ಣುಮಾಯೆಯಾಗಿದ್ದಾಗ ಕವೇರ ಅವಳನ್ನು ಸಾಕಿದ್ದರಿಂದ ಈ ನದಿಗೆ ಕಾವೇರಿಯೆಂಬ ಹೆಸರು ಬಂತು ಎನ್ನುತ್ತದೆ ಪುರಾಣ ಕಥೆಗಳು.








