ಬೆಂಗಳೂರು : ಎಚ್ ವಿಶ್ವನಾಥ್ ಅವರಿಗೆ ವಿಧಾನ ಪರಿಷತ್ ಗೆ ಟಿಕೆಟ್ ಕೈ ತಪ್ಪಿದ್ದರೂ, ವಿಧಾನ ಪರಿಷತ್ ಪ್ರವೇಶ ಮಾಡುವ ಅವಕಾಶ ಸಿಗುವ ಸಾಧ್ಯೆತೆಯಿದೆ ಎಂಬ ಮುನ್ಸೂಚನೆ ಬಿಜೆಪಿ ರಾಜ್ಯ ನಾಯಕರು ನೀಡುತ್ತಿದ್ದಾರೆ.
ರಾಜ್ಯ ವಿಧಾನ ಪರಿಷತ್ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಹಳ್ಳಿ ಹಕ್ಕಿ ಎಚ್ ವಿಶ್ವನಾಥ್ ಅಸಮಾಧಾನಗೊಂಡಿದ್ದಾರೆ. ಮೈತ್ರಿ ಸರ್ಕಾರವನ್ನು ಪತನಗೊಳಿಸಲು ರೆಬಲ್ ಶಾಸಕರನ್ನು ಒಗ್ಗೂಟಿಸುವ ಕಾರ್ಯದಲ್ಲಿ ಪ್ರಮುಖ ಪಾತ್ರವಹಿಸಿದ ಎಚ್ ವಿಶ್ವನಾಥ್ ಬಿಜೆಪಿ ಸರ್ಕಾರದ ರಚನೆಗೆ ಕಾರಣರಾಗಿದ್ದರು. ಹಾಗಾಗಿ ಅವರಿಗೆ ಸಚಿವ ಸ್ಥಾನ ನೀಡುವುದಾಗಿ ಬಿಎಸ್ ಯಡಿಯೂರಪ್ಪ ಮಾತು ಕೊಟ್ಟಿದ್ದರು ಎನ್ನಲಾಗಿದೆ. ಆದರೆ ಉಪಚುನಾವಣೆಯಲ್ಲಿ ವಿಶ್ವನಾಥ್ ಸೋಲು ಕಂಡ ಕಾರಣಕ್ಕೆ ಮತ್ತೆ ವಿಧಾನ ಪರಿಷತ್ ಟಿಕೆಟ್ ಪಡೆಯಲು ಹರಸಾಹಸ ಪಟ್ಟಿದ್ದಾರೆ.
ಸಾಕಷ್ಟು ಪ್ರಯತ್ನ ಗಳನ್ನು ಮಾಡಿದರು ವಿಶ್ವನಾಥ್ ಅವರಿಗೆ ವಿಧಾನ ಪರಿಷತ್ ಬಿಜೆಪಿ ಟಿಕೆಟ್ ಕೈ ತಪ್ಪಿದೆ. ಇದರಿಂದಾಗಿ ವಿಶ್ವನಾಥ್ ಕಂಗಾಲಾಗಿದ್ದಾರೆ. ಇದಾದ ಬಳಿಕ ಸಿಎಂ ಯಡಿಯೂರಪ್ಪ ಅವರನ್ನು ವಿಶ್ವನಾಥ್ ಭೇಟಿ ಮಾಡಿದ್ದರು. ಈ ಸಮಯದಲ್ಲಿ ಸ್ವಲ್ಪ ವೇಟ್ ಮಾಡಿ ಎಂದು ಸಿಎಂ ಯಡಿಯೂರಪ್ಪ ವಿಶ್ವನಾಥ್ ಅವರಿಗೆ ಹೇಳಿದರು.
ಇದಾದ ಬಳಿಕ ಕೃಷಿ ಸಚಿವ ಬಿ.ಸಿ ಪಾಟೀಲ್ ವಿಶ್ವನಾಥ್ ಅವರಿಗೆ ಸ್ಥಾನ ಸಿಗುವ ಮುನ್ಸೂಚನೆ ನೀಡಿದ್ದಾರೆ. ಇಂದು ಕೊಪ್ಪಳ್ಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವನಾಥ್ ಅವರಿಗೆ ಅವಕಾಶ ಮಾಡಿಕೊಡಬೇಕು ಎನ್ನುವ ಒತ್ತಾಯವಿದೆ. ಆರ್.ಶಂಕರ್, ಎಂಟಿಬಿ ನಾಗರಾಜ್, ವಿಶ್ವನಾಥ್ ಈ ಮೂವರಿಗೂ ಮೇಲ್ಮನೆ ಸ್ಥಾನ ಸಿಗಲಿದೆ ಎಂಬ ಭರವಸೆಯಿತ್ತು. ಆದರೆ ಇಬ್ಬರಿಗೆ ಮಾತ್ರ ಟಿಕೆಟ್ ಸಿಕ್ಕಿದೆ. ಇನ್ನೂ 5 ಸ್ಥಾನ್ ಗಳು ಖಾಲಿವೆ. ಐದು ಸ್ಥಾನಗಳಲ್ಲಿ ಒಂದು ಸ್ಥಾನ ವಿಶ್ವನಾಥ್ ಅವರಿಗೆ ಕೊಡಬಹುದು ಎಂದು ಹೇಳಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಎಚ್ ವಿಶ್ವನಾಥ್ ಅವರಿಗೆ ಪಕ್ಷ ಸೂಕ್ತ ಸ್ಥಾನಗಳನ್ನು ನೀಡಿ ಗೌರವಿಸುತ್ತದೆ ಎಂದು ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಜಗದೀಶ್ ಶೆಟ್ಟರ್ ಸಹ ಹೇಳಿದ್ದರು.








