ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಎಸ್ಸೆಸ್ಸೆಲ್ಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ 15 ವರ್ಷದ ಬಾಲಕ ಹೃದಯಾಘಾತದಿಂದ (Heart Attack) ಸಾವನ್ನಪ್ಪಿರುವ ಆಘಾತಕಾರಿ ಘಟನೆ ತುಮಕೂರು (Tumakuru) ತಾಲೂಕಿನ ಚಿಕ್ಕತೊಟ್ಟಿಲು ಕೆರೆ ಹತ್ತಿರ ನಡೆದಿದೆ.
ಭೀಮಾಶಂಕರ್ ಸಾವನ್ನಪ್ಪಿದ ವಿದ್ಯಾರ್ಥಿ ಎನ್ನಲಾಗಿದೆ. ಕ್ರೀಡಾಕೂಟದಲ್ಲಿ (Sports Event) ಭಾಗವಹಿಸಿದ್ದ ವಿದ್ಯಾರ್ಥಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಯಾದಗಿರಿ (Yadagiri) ಜಿಲ್ಲೆಯ ಸುರಪುರ ಮೂಲದ ಭೀಮಾಶಂಕರ್, ತುಮಕೂರು ತಾಲೂಕಿನ ಬೆಳದರ ಸರ್ಕಾರಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ.
ಚಿಕ್ಕತೊಟ್ಟಿಲು ಕೆರೆ ಬಳಿ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ. ಅಲ್ಲಿ ನಡೆದ ರಿಲೇಯಲ್ಲಿ ದ್ವಿತೀಯ ಸ್ಥಾನ ಪಡೆದು, ಭೀಮಾಶಂಕರ್ಗೆ ಬಹುಮಾನ ಸ್ವೀಕರಿಸುವ ಮೊದಲೇ ಹೃದಯಾಘಾತ ಸಂಭವಿಸಿದೆ. ಶಿಕ್ಷಕರು ಕೂಡಲೇ ಬಾಲಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲು ಯತ್ನಿಸಿದರು. ಆದರೆ, ಅಷ್ಟರಲ್ಲಿಯೇ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ತುಮಕೂರಿನ ಶ್ರೀದೇವಿ ಆಸ್ಪತ್ರೆಯಿಂದ ಮರಣೋತ್ತರ ಪರೀಕ್ಷೆಗಾಗಿ ವಿದ್ಯಾರ್ಥಿಯ ಮೃತದೇಹವನ್ನು ತುಮಕೂರು ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಕೋರಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








