ಜಮ್ಮು ಕಾಶ್ಮೀರದ ರಂಬನ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಮೇಲೆ ಭೂ ಕುಸಿತ ಉಂಟಾಗಿದ್ದು, ಜಮ್ಮು ಮತ್ತು ಶ್ರೀನಗರ ನಡುವಿನ ಸಂಚಾರ ಸ್ಥಗಿತಗೊಂಡಿದೆ.
ರಂಬನ್ ಜಿಲ್ಲೆಯಲ್ಲಿ ಸಾಗುವ ಈ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲವು ಕಾಮಗಾರಿಗಳು ನಡೆಯುತ್ತಿವೆ. ಇಂತಹ ಸಮಯದಲ್ಲಿ ಗುಡ್ಡ ಕುಸಿದು ರಸ್ತೆಯ ಮೇಲೆ ಬಿದ್ದಿದ್ದು, ಜಮ್ಮು ಮತ್ತು ಶ್ರೀನಗರ ನಡುವಿನ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿದೆ.
ಜಮ್ಮು ಮತ್ತು ಶ್ರೀನಗರ ನಡುವಿನ ರಾಷ್ಟ್ರೀಯ ಹೆದ್ದಾರಿ ಮೇಲೆ ಗುಡ್ಡ ಕುಸಿಯುವ ವಿಡಿಯೋ ವೈರಲ್ ಆಗಿದ್ದು, ನೂರಾರು ಯಾತ್ರಿಕರು ಈ ಘಟನೆಯಿಂದಾಗಿ ಸಿಲುಕಿಕೊಂಡಿದ್ದಾರೆ. ಗುಡ್ಡದ ಮಣ್ಣು, ಕಲ್ಲು ಕುಸಿದು ಬೀಳುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
270 ಕಿ. ಮೀ. ಉದ್ದದ ಜಮ್ಮು ಮತ್ತು ಶ್ರೀನಗರ ನಡುವಿನ ರಾಷ್ಟ್ರೀಯ ಹೆದ್ದಾರಿಯ ಸಂಚಾರ ಗುಡ್ಡ ಕುಸಿತದ ಕಾರಣ ಸಂಪೂರ್ಣ ಸ್ಥಗಿತವಾಗಿದೆ. ಶ್ರೀನಗರದಿಂದ ಜಮ್ಮುವಿಗೆ ಭಾನುವಾರ ಬೆಳಗ್ಗೆ 1,626 ಯಾತ್ರಾರ್ಥಿಗಳು ಸಂಚಾರ ಆರಂಭಿಸಿದ್ದರು. ದಕ್ಷಿಣ ಕಾಶ್ಮೀರದ ಹಿಮಾಲಯ ಭಾಗಕ್ಕೆ ಯಾತ್ರೆ ಕೈಗೊಂಡಿದ್ದ ಇವರು ಈಗ ಗುಡ್ಡ ಕುಸಿತದ ಕಾರಣ ರಸ್ತೆಯಲ್ಲಿ ಸಿಲುಕುವಂತಾಗಿದೆ.








