ಸಕ್ರೆಬೈಲು ಆನೆ ಬಿಡಾರದ ಒಂದು ಆನೆಗೆ ಮೈಸೂರು ದಸರಾದ ಜಂಬೂ ಸವಾರಿಯಲ್ಲಿ ಹೆಜ್ಜೆ ಹಾಕುವ ಅದೃಷ್ಟ ಈ ಬಾರಿ ಸಿಗುವ ಸಾಧ್ಯತೆ ಇದೆ.
ಮೈಸೂರು ದಸರಾಕ್ಕೆ ಗಜಪಡೆ ಅಂತಿಮಗೊಳಿಸುವ ಹೊಣೆ ಹೊತ್ತಿರುವ ಆಯ್ಕೆ ಸಮಿತಿ ಸೋಮವಾರ ಸಕ್ರೆಬೈಲು ಬಿಡಾರಕ್ಕೆ ಭೇಟಿ ನೀಡಿದ್ದು. 20-25 ಆನೆಗಳನ್ನು ಆಯ್ಕೆ ಮಾಡಲಾಗುತ್ತದೆ. ಇವುಗಳ ಪೈಕಿ 14 ಆನೆಗಳು ಜಂಬೂ ಸವಾರಿಯಲ್ಲಿ ಭಾಗವಹಿಸುವ ಅವಕಾಶ ಪಡೆಯುತ್ತವೆ.
ದುಬಾರೆ, ಮತ್ತಿಗೋಡು, ರಾಮಾಪುರ ಬಿಡಾರಗಳಿಂದ ಆನೆಗಳ ಆಯ್ಕೆ ಮಾಡಲಾಗುತ್ತಿತ್ತು. ಈ ಬಾರಿ ಸಕ್ರೆಬೈಲು ಬಿಡಾರದ ಆನೆಗಳಿಗೆ ಮೈಸೂರು ದಸರಾದಲ್ಲಿ ಭಾಗವಹಿಸುವ ಅವಕಾಶ ದೊರೆಯುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಅರಣ್ಯಾಧಿಕಾರಿಗಳು, ವನ್ಯಜೀವಿ ವಿಭಾಗದ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ತಂಡ ಸಕ್ರೆಬೈಲು ಆನೆ ಬಿಡಾರಕ್ಕೆ ಸೋಮವಾರ ಭೇಟಿ ನೀಡಿದೆ. ಡಿಸಿಎಫ್ ಪ್ರಸನ್ನಕೃಷ್ಣ ಪಟಗಾರ್ ಸಮ್ಮುಖದಲ್ಲಿ ಮೈಸೂರಿನ ವನ್ಯಜೀವಿ ವೈದ್ಯಾಧಿಕಾರಿ ಡಾ.ಮುಜೀಬ್ ನೇತೃತ್ವದ ತಂಡವು ಬಿಡಾರದ ಆನೆಗಳ ಕುರಿತು ಮಾಹಿತಿ ಸಂಗ್ರಹಿಸಿದೆ.
ಮೈಸೂರಿನಿಂದ ಆಗಮಿಸಿದ್ದ ದಸರಾ ಆನೆಗಳ ಆಯ್ಕೆ ಸಮಿತಿ ಅಧಿಕಾರಿಗಳು ಸಕ್ರೆಬೈಲು ಬಿಡಾರದ ಆನೆಗಳಾದ ಸಾಗರ್, ಆಲೆ ಹಾಗೂ ಬಾಲಣ್ಣ ಬಗ್ಗೆ ಮಾಹಿತಿ ಪಡೆದಿದ್ದಾರೆ. ಆನೆಗಳ ಅಂತಿಮ ಪಟ್ಟಿ ಬಿಡುಗಡೆ ಯಾವಾಗ ಎಂಬುದು ನಿರ್ಧಿಷ್ಟವಾಗಿ ತಿಳಿದಿಲ್ಲ. ಈ ಮೂರು ಆನೆಗಳ ಪೈಕಿ ಒಂದು ಆನೆ ಮೈಸೂರು ದಸರಾದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ ಎನ್ನಲಾಗುತ್ತಿದೆ.








