ಮುಂಬರುವ ಏಷ್ಯಾಕಪ್ ಮತ್ತು 2023ರ ODI ವಿಶ್ವಕಪ್ ಟೂರ್ನಿಯಲ್ಲಿ ಸ್ಟಾರ್ ಆಲ್ರೌಂಡರ್ ಹಾಗೂ ಅನುಭವಿ ಆಟಗಾರ ಶಕೀಬ್ ಅಲ್ ಹಸನ್ ಬಾಂಗ್ಲಾದೇಶ ತಂಡವನ್ನ ಮುನ್ನಡೆಸಲಿದ್ದಾರೆ ಎಂದು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ(ಬಿಸಿಬಿ) ಖಚಿತಪಡಿಸಿದೆ.
ಬಾಂಗ್ಲಾದೇಶ ತಂಡದ ಕ್ಯಾಪ್ಟನ್ ಸ್ಥಾನಕ್ಕೆ ಈ ಮೊದಲು ಲಿಟನ್ ದಾಸ್ ಹಾಗೂ ಮೆಹದಿ ಹಸನ್ ಅವರನ್ನ ಆಯ್ಕೆ ಮಾಡುವ ಬಗ್ಗೆ ಚರ್ಚೆಗಳು ನಡೆದಿತ್ತು. ಆದರೆ ಅಂತಿಮವಾಗಿ ತಂಡದ ಅನುಭವಿ ಆಟಗಾರ ಶಕೀಬ್ ಅಲ್ ಹಸನ್ಗೆ ನಾಯಕತ್ವದ ಜವಾಬ್ದಾರಿ ನೀಡಲಾಗಿದೆ. ಈ ಕುರಿತಂತೆ ಮಾಹಿತಿ ನೀಡಿರುವ ಬಿಸಿಬಿ ಅಧ್ಯಕ್ಷ ನಜ್ಮುಲ್ ಹಸನ್, “ನಾವು ಏಷ್ಯಾಕಪ್ ಮತ್ತು ವಿಶ್ವಕಪ್ಗೆ ಶಕೀಬ್ ಅಲ್ ಹಸನ್ ಅವರನ್ನ ತಂಡದ ನಾಯಕರನ್ನಾಗಿ ನೇಮಿಸಿದ್ದೇವೆ. ಈ ಎರಡು ಟೂರ್ನಿಗಳಿಗೆ ಆ.12ರಂದು 17 ಮಂದಿ ಆಟಗಾರರ ತಂಡವನ್ನು ಪ್ರಕಟಿಸಲಾಗುವುದು ಎಂದಿದ್ದಾರೆ.
ಪ್ರಸ್ತುತ ಟೆಸ್ಟ್ ಮತ್ತು ಟಿ20 ತಂಡದ ನಾಯಕರಾಗಿರುವ ಶಕೀಬ್, 2011ರ ಏಕದಿನ ವಿಶ್ವಕಪ್ ಸೇರಿದಂತೆ ಏಕದಿನ ಕ್ರಿಕೆಟ್ನಲ್ಲಿ ಹಲವು ಬಾರಿ ಬಾಂಗ್ಲಾದೇಶ ತಂಡವನ್ನ ಮುನ್ನಡೆಸಿದ್ದಾರೆ. ತಂಡದ ಪ್ರಮುಖ ಆಲ್ರೌಂಡರ್ ಆಗಿರುವ ಶಕೀಬ್, ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ತಂಡಕ್ಕೆ ಆಸರೆಯಾಗಬಲ್ಲ ಸಾಮರ್ಥ್ಯ ಹೊಂದಿದ್ದಾರೆ.
ಮತ್ತೊಂದೆಡೆ ಏಷ್ಯಾಕಪ್ ಹಾಗೂ ವಿಶ್ವಕಪ್ ಟೂರ್ನಿಗೆ ಬಾಂಗ್ಲಾದೇಶ ತಂಡ ಈಗಾಗಲೇ ಸಿದ್ಧತೆ ಆರಂಭಿಸಿದೆ. ಏಷ್ಯಾಕಪ್ನಲ್ಲಿ ಬಾಂಗ್ಲಾದೇಶ ತಂಡ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ತಂಡದೊಂದಿಗೆ ಬಿ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಆ.31ರಂದು ಶ್ರೀಲಂಕಾ ವಿರುದ್ಧ ತನ್ನ ಮೊದಲ ಪಂದ್ಯವನ್ನಾಡಲಿದೆ. ಇನ್ನೂ ಅಕ್ಟೋಬರ್ 7ರಂದು ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯಲಿರುವ ODI ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ, ತನ್ನ ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಆಡಲಿದೆ.








