ತವರಿನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ತಂಡ ತಯಾರಿ ಆರಂಭಿಸಿದ್ದು, ಯಾರೆಲ್ಲಾ ತಂಡದಲ್ಲಿ ಸ್ಥಾನ ಪಡೆಯುತ್ತಾರೆ ಎಂಬ ಕುತೂಹಲ ಮೂಡಿದೆ. ಇವೆಲ್ಲದರ ನಡುವೆಯೂ ತಂಡದ 4ನೇ ಕ್ರಮಾಂಕದಲ್ಲಿ ಆಡುವವರು ಯಾರು? ಎಂಬ ಪ್ರಶ್ನೆ ಉದ್ಭವಿಸಿದೆ.
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮ, ಇತ್ತೀಚೆಗೆ ಯುವರಾಜ್ ಸಿಂಗ್ ನಂತರದಲ್ಲಿ ODI ಕ್ರಿಕೆಟ್‌ನಲ್ಲಿ 4ನೇ ಕ್ರಮಾಂಕದಲ್ಲಿ ಯಾವುದೇ ಬ್ಯಾಟರ್ ಸಕ್ಸಸ್ ಕಂಡಿಲ್ಲ ಎಂಬ ಹೇಳಿಕೆ ನೀಡಿದ್ದರು. ಹಿಟ್‌ಮ್ಯಾನ್ ನೀಡಿರುವ ಈ ಹೇಳಿಕೆ ಇದೀಗ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಪ್ರಮುಖವಾಗಿ ಏಕದಿನ ವಿಶ್ವಕಪ್ ಟೂರ್ನಿಗೆ ಆಟಗಾರರ ಆಯ್ಕೆ ಮಾಡುವ ನಿಟ್ಟಿನಲ್ಲಿ ತಯಾರಿ ನಡೆಯುತ್ತಿರುವ ಬೆನ್ನಲ್ಲೇ ಈ ಚರ್ಚೆ ಉದ್ಭವಿಸಿದೆ.
2023ರ ಅಕ್ಟೋಬರ್-ನವೆಂಬರ್‌ನಲ್ಲಿ ತವರಿನಲ್ಲಿ ನಡೆಯುವ ಏಕದಿನ ವಿಶ್ವಕಪ್ ಟೂರ್ನಿಗೆ ಕೇವಲ ಎರಡು ತಿಂಗಳಷ್ಟೇ ಬಾಕಿ ಉಳಿದಿದೆ. ಇದರ ನಡುವೆ ಟೀಮ್ ಇಂಡಿಯಾದ 4ನೇ ಕ್ರಮಾಂಕದ ಬ್ಯಾಟರ್‌ನ ಹುಡುಕಾಟ ನಡೆಯುತ್ತಲೇ ಇದೆ. ಯುವರಾಜ್ ಸಿಂಗ್ ವಿದಾಯದ ನಂತರದಲ್ಲಿ ಟೀಂ ಇಂಡಿಯಾದ 4ನೇ ಕ್ರಮಾಂಕದಲ್ಲಿ ಸಾಕಷ್ಟು ಆಟಗಾರರು ಆಡಿದ್ದರೂ, ನಿರೀಕ್ಷಿತ ಯಶಸ್ಸು ಪಡೆಯಲು ಸಾಧ್ಯವಾಗಿಲ್ಲ.
ಈ ನಡುವೆ ಯುವ ಆಟಗಾರ ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ ಸೇರಿದಂತೆ ಹಲವು ಆಟಗಾರರು 4ನೇ ಕ್ರಮಾಂಕದಲ್ಲಿ ಆಡಿದ್ದರು. ಆದರೆ ನಂತರದಲ್ಲಿ ಎದುರಾದ ಗಾಯದ ಸಮಸ್ಯೆಯ ಕಾರಣಕ್ಕೆ ತಂಡದ 4ನೇ ಕ್ರಮಾಂಕಕ್ಕೆ ಸೂಕ್ತ ಆಟಗಾರರು ಲಭಿಸದಿರುವುದು ತಂಡಕ್ಕೆ ದೊಡ್ಡ ಹಿನ್ನಡೆ ಮೂಡಿಸಿದೆ. ಹೀಗಾಗಿ ಮುಂಬರುವ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡದ 4ನೇ ಕ್ರಮಾಂಕದಲ್ಲಿ ಯಾರು? ಕಣಕ್ಕಿಳಿಯುತ್ತಾರೆಂಬ ಕುರಿತು ಚರ್ಚೆ ನಡೆಯುತ್ತಿದೆ.
ಪ್ರಮುಖವಾಗಿ ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಸಂಜೂ ಸ್ಯಾಮ್ಸನ್ ಅವರ ಹೆಸರುಗಳ ಜೊತೆಗೆ ಇತ್ತೀಚೆಗೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿರುವ ತಿಲಕ್ ವರ್ಮ ಕೂಡ 4ನೇ ಕ್ರಮಾಂಕದ ಆಟಗಾರನಾಗಿ ಸ್ಥಾನ ಪಡೆಯುವ ರೇಸ್‌ನಲ್ಲಿದ್ದಾರೆ. ಆದರೆ ಅಂತಿಮವಾಗಿ ಆಯ್ಕೆ ಮಂಡಳಿ ಯಾರಿಗೆ ಮಣೆ ಹಾಕಲಿದೆ ಎಂಬುದನ್ನ ಕಾದು ನೋಡಬೇಕಿದೆ.