ಉತ್ತರ ಪ್ರದೇಶದ ಮೊರಾದಾಬಾದ್ ನಲ್ಲಿ ಬಿಜೆಪಿ ಮುಖಂಡರೊಬ್ಬರನ್ನು ಅವರ ನಿವಾಸದ ಹೊರಗೆ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ನಡೆದಿದೆ.
30 ವರ್ಷದ ಅನುಜ್ ಚೌಧರಿ ಹತ್ಯೆಯಾದ ವ್ಯಕ್ತಿ. ಚೌಧರಿ ಅವರು ಮೊರಾದಾಬಾದ್ ನಲ್ಲಿನ ತಮ್ಮ ಅಪಾರ್ಟ್ ಮೆಂಟ್ ನ ಹೊರಗೆ ವಾಕಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಬೈಕ್ ನಲ್ಲಿ ಬಂದಿದ್ದ ಅಪರಿಚಿತ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಸಂತ್ರಸ್ತರ ಕುಟುಂಬ ಸದಸ್ಯರು ದೂರು ದಾಖಲಿಸಿದ್ದಾರೆ. ಅಮಿತ್ ಚೌಧರಿ ಹಾಗೂ ಅನಿಕೇತ್ ಎಂಬ ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಮೊರಾದಾಬಾದ್ ನ ಹಿರಿಯ ಪೊಲೀಸ್ ಸೂಪರಿಂಟೆಂಡೆಂಟ್ ಹೇಮರಾಜ್ ಮೀನಾ ತಿಳಿಸಿದ್ದಾರೆ.
ಚೌಧರಿ, ಸಂಭಾಲ್ ನ ಅಸ್ಮೋಲಿ ಬ್ಲಾಕ್ ನಿಂದ ಬ್ಲಾಕ್ ಮುಖ್ಯಸ್ಥರ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ, ಸೋತಿದ್ದರು. ಈ ಕೊಲೆಗೆ ರಾಜಕೀಯ ದ್ವೇಷವೇ ಕಾರಣ ಎಂದು ಅವರ ಕುಟುಂಬಸ್ಥರು ಆರೋಪಿಸಿದ್ದಾರೆ. ಸದ್ಯ ಪೊಲೀಸರು ನಾಲ್ವರ ವಿರುದ್ಧ ಪ್ರಕರಣದ ಹಿನ್ನೆಲೆಯಲ್ಲಿ ನಾಲ್ವರ ವಿರುದ್ಧ ದೂರು ದಾಖಲಿಸಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬಿಸಿದ್ದಾರೆ.








