ರಿಲಯನ್ಸ್ ಇಂಡಸ್ಟ್ರೀಸ್ ಸಾಲಮುಕ್ತ
ಹೊಸದಿಲ್ಲಿ, ಜೂನ್ 20: ರಿಲಯನ್ಸ್ ಇಂಡಸ್ಟ್ರೀಸ್ ನಿವ್ವಳ ಸಾಲಮುಕ್ತವಾಗಿದೆ ಎಂದು ಉದ್ಯಮಿ ಮುಕೇಶ್ ಅಂಬಾನಿ ಘೋಷಿಸಿದ್ದಾರೆ.ಜಾಗತಿಕ ಹೂಡಿಕೆದಾರರಿಂದ 1.69 ಲಕ್ಷ ಕೋಟಿ ರೂ ಸಂಗ್ರಹಗೊಂಡ ಹಿನ್ನಲೆಯಲ್ಲಿ ಮತ್ತು ಹಕ್ಕುಸ್ವಾಮ್ಯಗಳನ್ನು ಎರಡು ತಿಂಗಳಲ್ಲಿ ಬಗೆಹರಿಸಿಕೊಂಡ ಪ್ರಯುಕ್ತ ರಿಲಯನ್ಸ್ ಇಂಡಸ್ಟ್ರೀಸ್ ಸಾಲಮುಕ್ತವಾಗಿದೆ ಎಂದು ಅಂಬಾನಿ ಹೇಳಿದ್ದಾರೆ.

ಕಳೆದ ಎರಡು ತಿಂಗಳಲ್ಲಿ ಜಿಯೊ ಪ್ಲಾಟ್ ಫಾರ್ಮ್ಸ್ ಲಿಮಿಟೆಡ್ ನ ಕಾಲು ಭಾಗ ಷೇರನ್ನು ರಿಲಯನ್ಸ್ ಇಂಡಸ್ಟ್ರೀಸ್ ಜಾಗತಿಕ ಮಟ್ಟದ ತಂತ್ರಜ್ಞಾನ ಹೂಡಿಕೆ ಸಂಸ್ಥೆಗಳಿಗೆ, 1.15 ಲಕ್ಷ ಕೋಟಿ ರೂಪಾಯಿಗೆ ಮಾರಾಟ ಮಾಡಿದೆ. ಅಷ್ಟೇ ಅಲ್ಲ ಕಳೆದ 58 ದಿನಗಳಲ್ಲಿ ಹಕ್ಕುಸ್ವಾಮ್ಯ ವಿಷಯಗಳಲ್ಲಿ 53 ಸಾವಿರದ 124.20 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ.
ಕಳೆದ ವರ್ಷ ಇಂಗ್ಲೆಂಡಿನ ಬಿಪಿಪಿಎಲ್ ಸಿಗೆ ಇಂಧನ ಚಿಲ್ಲರೆ ವ್ಯಾಪಾರದ ಶೇಕಡಾ 49 ಭಾಗವನ್ನು 7 ಸಾವಿರ ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದು, ಎಲ್ಲಾ ಸೇರಿ ಒಟ್ಟು 1.75 ಲಕ್ಷ ಕೋಟಿ ರೂಪಾಯಿಗಳನ್ನು ಸಂಗ್ರಹಿಸಿತ್ತು. ಮಾರ್ಚ್ 31 ರ ಅವಧಿಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ 1 ಲಕ್ಷದ 61 ಸಾವಿರದ 035 ಕೋಟಿ ರೂಪಾಯಿ ನಿವ್ವಳ ಸಾಲ ಹೊಂದಿದ್ದು, ಇದೀಗ ಷೇರುಗಳ ಮಾರಾಟ ಮತ್ತು ಹೂಡಿಕೆಯಿಂದಾಗಿ ಸಂಸ್ಥೆಯು ಸಂಪೂರ್ಣ ಸಾಲಮುಕ್ತವಾಗಿದೆ ಎಂದು ಮುಕೇಶ್ ಅಂಬಾನಿ ಘೋಷಿಸಿದ್ದಾರೆ.

ರಿಲಯನ್ಸ್ ಕಂಪೆನಿ ಸಾಲಮುಕ್ತಗೊಂಡ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿರುವ ಮುಕೇಶ್ ಅಂಬಾನಿ ನಾನು ನನ್ನ ಕಂಪನಿಯ ಷೇರುದಾರರಿಗೆ ಮಾರ್ಚ್ 31, 2021ರ ಮೊದಲು ಸಾಲಮುಕ್ತಗೊಳಿಸುತ್ತೇನೆ ಎಂದು ನೀಡಿದ್ದ ಭರವಸೆಯನ್ನು ಪೂರ್ಣಗೊಳಿಸಿದ್ದೇನೆ ಎಂದು ಸಂತೋಷವನ್ನು ಹಂಚಿಕೊಂಡಿದ್ದಾರೆ.
ಕಳೆದ ಏಪ್ರಿಲ್ ತಿಂಗಳಿನಿಂದ ಫೇಸ್ ಬುಕ್, ಸಿಲ್ವರ್ ಲೇಕ್, ವಿಸ್ಟಾ ಈಕ್ವಿಟಿ ಪಾರ್ಟ್ನರ್ಸ್, ಜನರಲ್ ಅಟ್ಲಾಂಟಿಕ್, ಕೆಕೆಆರ್, ಮುಬಡಾಲಾ, ಅಡಿಯಾ, ಟಿಪಿಜಿ, ಎಲ್ ಕ್ಯಾಟ್ಟರ್ಟೊನ್ ಮತ್ತು ಪಿಐಎಫ್ ಸೇರಿ 95 ಕೋಟಿ ರೂ. ರಿಲಯನ್ಸ್ ನ ಜಿಯೊ ಪ್ರಾಟ್ ಫಾರ್ಮ್ ನಡಿಯಲ್ಲಿ ಹೂಡಿಕೆ ಮಾಡಿವೆ.








