ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇ (Bengaluru Mysuru Exprpessway)ನಲ್ಲಿ ದರೋಡೆ ಗ್ಯಾಂಗ್ ಒಂದು ವಿಶ್ರಾಂತಿಗೆ ಎಂದು ವಾಹನ ನಿಲ್ಲಿಸಿದವರಿಂದ ಹಣ, ಚಿನ್ನಾಭರಣವನ್ನು ಕಸಿದುಕೊಂಡು ಪರಾರಿಯಾಗುತ್ತಿರುವ ಘಟನೆಗಳು ವರದಿಯಾಗುತ್ತಿವೆ.
ಶನಿವಾರ ಒಂದೇ ರಾತ್ರಿ ರಾತ್ರಿ ವೇಳೆ ಈ ಹೆದ್ದಾರಿಯಲ್ಲಿ 2 ಗಂಟೆಯ ಅಂತರದಲ್ಲಿ 2 ದರೋಡೆ ನಡೆದ ಪ್ರಕರಣಗಳು ವರದಿಯಾಗಿವೆ. ಮಂಡ್ಯ (Mandya) ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ವ್ಯಾಪ್ತಿಯಲ್ಲಿ ಈ 2 ಘಟನೆಗಳು ಜರುಗಿವೆ. ನಗುವನಹಳ್ಳಿ ಹತ್ತಿರ ಉಡುಪಿ ಮೂಲದ ಶಿವಪ್ರಸಾದ್ ಸುಮಾ ದಂಪತಿ ಕಾರು ನಿಲ್ಲಿಸಿ ವಿಶ್ರಾಂತಿ ಪಡೆಯುತ್ತಿದ್ದರು. ಪ್ರವಾಸಕ್ಕಾಗಿ ಈ ದಂಪತಿ ಮಕ್ಕಳೊಂದಿಗೆ ಮೈಸೂರಿಗೆ ತೆರಳಿದ್ದರು ಎನ್ನಲಾಗಿದೆ.
ಹೋಟೆಲ್ಗಳಲ್ಲಿ ಕೊಠಡಿ ಸಿಗದ ಹಿನ್ನೆಲೆಯಲ್ಲಿ ಎಕ್ಸ್ಪ್ರೆಸ್ ವೇನಲ್ಲಿ ಕಾರು ನಿಲ್ಲಿಸಿ ಅವರು ವಿಶ್ರಾಂತಿ ಪಡೆಯುತ್ತಿದ್ದರು. ಈ ಸಂದರ್ಭದಲ್ಲಿ ಹೆಲ್ಮೆಟ್ ಧರಿಸಿ ಬಂದ ಇಬ್ಬರು ದರೋಡೆಕೋರರು (Robbers) ದಂಪತಿಗೆ ಚಾಕು ತೋರಿಸಿ 30 ಗ್ರಾಂ ಚಿನ್ನ ದೋಚಿ ಎಸ್ಕೇಪ್ ಆಗಿದ್ದಾರೆ. ಈ ಘಟನೆ ನಡೆದ ಬೆನ್ನಲ್ಲಿಯೇ ಮತ್ತೊಂದು ದರೋಡೆ ಪ್ರಕರಣ ವರದಿಯಾಗಿದೆ.
ಘಟನಾ ಸ್ಥಳಕ್ಕೆ ಮಂಡ್ಯ ಎಸ್ಪಿ ಎನ್. ಯತೀಶ್ ಭೇಟಿ ನೀಡಿ ಚಿನ್ನಾಭರಣ ಕಳೆದುಕೊಂಡವರಿಂದ ಮಾಹಿತಿ ಸಂಗ್ರಹಿಸಿ, ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.








