ನವದೆಹಲಿ: ಭಾರತ-ಚೀನಾ ಗಡಿ ಸಂಘರ್ಷ ಕುರಿತಂತೆ ಭಾರತದ ಒಂದಿಂಚು ಭೂಮಿ ಮೇಲೆ ಕಣ್ಣಿಡಲು ಯಾರಿಂದಲೂ ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟನೆ ನೀಡಿದ ಬೆನ್ನಲ್ಲೇ, ಕಾಂಗ್ರೆಸ್ ಮುಖಂಡ ರಾಹುಲ್ಗಾಂಧಿ ವಾಗ್ದಾಳಿ ಮುಂದುವರೆಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಭೂಪ್ರದೇಶವನ್ನು ಚೀನಾಕ್ಕೆ ಒಪ್ಪಿಸಿದ್ದಾರೆ. ಒಂದು ವೇಳೆ ಭೂಪ್ರದೇಶವು ಚೀನಾದ್ದಾಗಿದ್ದರೆ ಭಾರತೀಯ ಯೋಧರು ಏಕೆ ಹುತಾತ್ಮರಾದರು. ಅವರನ್ನು ಕೊಂದಿದ್ದು ಎಲ್ಲಿ ಎಂದು ರಾಹುಲ್ಗಾಂಧಿ ಟ್ವಿಟರ್ನಲ್ಲಿ ಪ್ರಶ್ನಿಸಿದ್ದಾರೆ.
ರಾಹುಲ್ಗಾಂಧಿ ಆರೋಪಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಹುಲ್ಗಾಂಧಿ ಕ್ಷುಲ್ಲಕ ರಾಜಕೀಯವನ್ನು ಮೀರಿ ದೇಶದ ಹಿತಾಸಕ್ತಿಯ ವಿಚಾರದಲ್ಲಿ ಒಗ್ಗಟ್ಟಾಗಿ ನಿಲ್ಲಲಿ ಎಂದು ತಿರುಗೇಟು ನಿಡಿದ್ದಾರೆ.
ಗಾಲ್ವಾನ್ ಕಣಿವೆಯಲ್ಲಿ ಭಾರತ-ಚೀನಾ ಯೋಧರ ಘರ್ಷಣೆಯಲ್ಲಿ ಗಾಯಗೊಂಡ ಯೋಧರೊಬ್ಬರ ತಂದೆ ಮಾತನಾಡಿರುವ ವಿಡಿಯೋ ಟ್ಯಾಗ್ ಮಾಡಿರುವ ಅಮಿತ್ ಶಾ, ಧೀರ ಯೋಧನ ತಂದೆ ರಾಹುಲ್ಗಾಂಧಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ ಎಂದು ಕುಟುಕಿದ್ದಾರೆ.
ಚೀನಾ ಗಡಿ ವಿಚಾರದಲ್ಲಿ ಇಡೀ ದೇಶ ಒಗ್ಗಟ್ಟು ಪ್ರದರ್ಶನ ಮಾಡುತ್ತಿರುವಾಗ ರಾಹುಲ್ಗಾಂಧಿ ಸಣ್ಣತನವನ್ನು ಪ್ರದರ್ಶನ ಮಾಡಿದ್ದಾರೆ. ರಾಜಕೀಯ ಬಿಟ್ಟು ರಾಷ್ಟ್ರದ ಹಿತಾಸಕ್ತಿಗೆ ಒಗ್ಗಟ್ಟಾಗಿ ನಿಲ್ಲಬೇಕು ಎಂದು ಅಮಿತಾ ಶಾ ಟ್ವಿಟರ್ನಲ್ಲೇ ಟಾಂಗ್ ನೀಡಿದ್ದಾರೆ.
ಯೋಧನ ತಂದೆಯಿಂದಲೂ ರಾಹುಲ್ಗೆ ಪಾಠ..!
ಗಾಲ್ವನ್ ಗಡಿ ವಿಚಾರದಲ್ಲಿ ಮೋದಿ ಸರ್ಕಾರದ ವಿರುದ್ಧ ಟೀಕೆಗಳ ಸುರಿಮಳೆಗೈಯುತ್ತಿರುವ ರಾಹುಲ್ಗಾಂಧಿಗೆ ಗಾಯಗೊಂಡ ಯೋಧರೊಬ್ಬರ ತಂದೆ ಪಾಠ ಮಾಡಿದ್ದಾರೆ. ಭಾರತದ ಸೇನೆ ಚೀನಾವನ್ನು ಸೋಲಿಸುವಷ್ಟು ಶಕ್ತವಾಗಿದೆ. ರಾಹುಲ್ಗಾಂಧಿ ಈ ವಿಚಾರದಲ್ಲಿ ರಾಜಕೀಯ ಬೆರೆಸಬೇಡಿ. ನನ್ನ ಮಗ ದೇಶಕ್ಕಾಗಿ ಹೋರಾಡುತ್ತಾನೆ, ಹೋರಾಡುತ್ತಲೇ ಇರುತ್ತಾನೆ ಎಂದು ಯೋಧನ ತಂದೆ ನೀತಿ ಪಾಠ ಹೇಳಿದ್ದಾರೆ.
ಯೋಧನ ತಂದೆಯ ವಿಡಿಯೋ ಟ್ಯಾಗ್ ಮಾಡಿರುವ ಅಮಿತ್ ಶಾ ಅವರಿಗೆ ರೀಟ್ವೀಟ್ ಮಾಡಿರುವ ರಾಹುಲ್ಗಾಂಧಿ, ಸಂಪುಟದ ಸಚಿವರೊಬ್ಬರು ಪ್ರಧಾನಿ ಮಂತ್ರಿಗಳ ರಕ್ಷಣೆ ಮಾಡಲು ಸುಳ್ಳು ಹೇಳಲು ನಿಂತಿರುವುದು ಬೇಸರದ ಸಂಗತಿಯಾಗಿದೆ. ನಿಮ್ಮ ಸುಳ್ಳಿನ ಜತೆ ನಮ್ಮ ಯೋಧರ ಬಲಿದಾನವನ್ನು ಅಪಮಾನ ಮಾಡಬೇಡಿ ಎಂದು ರಾಹುಲ್ಗಾಂಧಿ ವಾಗ್ದಾಳಿ ನಡೆಸಿದ್ದಾರೆ.







