ನಾಯಕ ಮಿಚೆಲ್ ಮಾರ್ಷ್(92*) ಅಬ್ಬರದ ಬ್ಯಾಟಿಂಗ್ ಹಾಗೂ ಬೌಲರ್‌ಗಳ ಸಂಘಟಿತ ಪ್ರದರ್ಶನದ ನೆರವಿನಿಂದ ಸೌತ್ ಆಫ್ರಿಕಾ ವಿರುದ್ಧ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ 111 ರನ್‌ಗಳ ಗೆಲುವು ಸಾಧಿಸಿದೆ.
ಡರ್ಬನ್‌ನಲ್ಲಿ ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಮಿಚೆಲ್ ಮಾರ್ಷ್(92*) ಹಾಗೂ ಟಿಮ್ ಡೇವಿಡ್(64) ಅವರ ಅಬ್ಬರದ ಬ್ಯಾಟಿಂಗ್‌ನಿಂದ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 226 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಈ ಟಾರ್ಗೆಟ್ ಚೇಸ್ ಮಾಡಿದ ಸೌತ್ ಆಫ್ರಿಕಾ 15.3 ಓವರ್‌ಗಳಲ್ಲಿ 115 ರನ್‌ಗಳಿಗೆ ಆಲೌಟ್ ಆಗುವ ಮೂಲಕ 111 ರನ್‌ಗಳ ಸೋಲೊಪ್ಪಿಕೊಂಡಿತು. ಈ ಗೆಲುವಿನೊಂದಿಗೆ ಆಸ್ಟ್ರೇಲಿಯಾ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.
ಮಾರ್ಷ್-ಡೇವಿಡ್ ಅಬ್ಬರ:
ಟಾಸ್ ಸೋತು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದುಕೊಂಡ ಆಸ್ಟ್ರೇಲಿಯ ಸಾಧಾರಣ ಆರಂಭ ಕಂಡಿತು. ಆರಂಭಿಕರಾದ ಟ್ರಾವಿಸ್ ಹೆಡ್(6), ಮ್ಯಾಥ್ಯೂವ್ ಶಾರ್ಟ್(20) ಬಹುಬೇಗನೆ ಔಟಾದರೆ. ಈ ವೇಳೆ ಕಣಕ್ಕಿಳಿದ ಜೋಶ್ ಇಂಗ್ಲಿಸ್(1) ಹಾಗೂ ಮಾರ್ಕಸ್ ಸ್ಟಾಯ್ನಿಸ್(6) ಬ್ಯಾಟಿಂಗ್ ವೈಫಲ್ಯಕ್ಕೆ ಸಿಲುಕಿದರು. ಪರಿಣಾಮ ಆಸ್ಟ್ರೇಲಿಯಾ 77 ರನ್‌ಗಳಿಗೆ 4 ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಜೊತೆಯಾದ ನಾಯಕ ಮಿಚೆಲ್ ಮಾರ್ಷ್(92* ರನ್, 49 ಬಾಲ್, 13 ಬೌಂಡರಿ, 2 ಸಿಕ್ಸ್) ಹಾಗೂ ಟಿಮ್ ಡೇವಿಡ್(64 ರನ್, 28 ಬಾಲ್, 7 ಬೌಂಡರಿ, 4 ಸಿಕ್ಸ್) ಬಿರುಸಿನ ಆಟದ ಮೂಲಕ ತಂಡದ ಮೊತ್ತ ಹೆಚ್ಚಿಸಿದರು. ಇನ್ನಿಂಗ್ಸ್‌ನ ಕೊನೆಯಲ್ಲಿ ಬಂದ ಆರೋನ್ ಹಾರ್ಡೈ(23*) ತಂಡದ ಮೊತ್ತವನ್ನ 226 ರನ್‌ಗಳಿಗೆ ಹೆಚ್ಚಿಸುವಲ್ಲಿ ಯಶಸ್ವಿಯಾದರು. ಸೌತ್ ಆಫ್ರಿಕಾ ಪರ ವಿಲಿಯಮ್ಸ್ 3 ವಿಕೆಟ್ ಪಡೆದರೆ. ಜಾನ್ಸನ್, ಶಂಮ್ಸಿ ಹಾಗೂ ಕಾಟ್ಜೆ ತಲಾ 1 ವಿಕೆಟ್ ಪಡೆದರು.
ಆಫ್ರಿಕಾ ಬ್ಯಾಟಿಂಗ್ ವೈಫಲ್ಯ:
ಆಸ್ಟ್ರೇಲಿಯಾ ನೀಡಿದ ಕಠಿಣ ಟಾರ್ಗೆಟ್ ಬೆನ್ನತ್ತಿದ ಸೌತ್ ಆಫ್ರಿಕಾ, ಬ್ಯಾಟಿಂಗ್ ವೈಫಲ್ಯಕ್ಕೆ ಸಿಲುಕಿತು. ಆಸೀಸ್ ಬೌಲಿಂಗ್ ದಾಳಿಗೆ ಸಿಲುಕಿದ ಸೌತ್ ಆಫ್ರಿಕಾ ಪರ ಆರಂಭಿಕ ಬ್ಯಾಟರ್ ಹೆಂಡ್ರಿಕ್ಸ್(56), ದುಸೇನ್(21) ಹಾಗೂ ಜಾನ್ಸೆನ್(20) ಹೊರತಾಗಿ ಯಾರೊಬ್ಬರು ಎರಡಂಕ್ಕಿಯ ಮೊತ್ತ ಕಲೆಹಾಕಲಿಲ್ಲ. ಪರಿಣಾಮ 15.3 ಓವರ್‌ಗಳಲ್ಲಿ 115 ರನ್‌ಗಳಿಗೆ ಆಲೌಟ್ ಆಗಿ 111 ರನ್‌ಗಳ ಸೋಲು ಕಂಡಿತು. ಆಸೀಸ್ ಪರ ಪರಿಣಾಮಕಾರಿ ಬೌಲಿಂಗ್ ದಾಳಿ ನಡೆಸಿದ ತನ್ವೀರ್ ಸಾಂಘ(4/31), ಸ್ಟಾಯ್ನಿಸ್(3/18), ಜಾನ್ಸನ್(2/33) ಉತ್ತಮ ಬೌಲಿಂಗ್ ದಾಳಿ ನಡೆಸಿದರು.
ಭರ್ಜರಿ ಬ್ಯಾಟಿಂಗ್ ಮೂಲಕ ತಂಡದ ಗೆಲುವಿಗೆ ಕಾರಣರಾದ ಮಿಚೆಲ್ ಮಾರ್ಷ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಉಭಯ ತಂಡಗಳ ನಡುವಿನ 2ನೇ ಟಿ20 ಪಂದ್ಯ ಸೆಪ್ಟೆಂಬರ್ 1ರಂದು ನಡೆಯಲಿದೆ.