ನವದೆಹಲಿ: ಕೊರೊನಾ ಲಾಕ್‍ಡೌನ್‍ನಿಂದ ಕೆಲಸ ಇಲ್ಲದೆ ಒಪ್ಪೊತ್ತಿನ ಊಟಕ್ಕೂ ಪರದಾಡುತ್ತಿರುವ ವಲಸೆ ಕಾರ್ಮಿಕರಿಗಾಗಿ ಆರಂಭಿಸಿರುವ 50 ಸಾವಿರ ಕೋಟಿ ವೆಚ್ಚದ ಗರೀಬ್ ಕಲ್ಯಾಣ್ ಯೋಜೆನೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು.
ವಿಡಿಯೋ ಕಾನ್ಫರೆನ್ಸ್ ಮೂಲಕ ಯೋಜನೆಗೆ ಚಾಲನೆ ನೀಡಿದ ಮೋದಿ, ಯುವಕರು ಮತ್ತು ಮಹಿಳಾ ವಲಸೆ ಕಾರ್ಮಿಕರಿಗೆ ಇದು ಉತ್ತಮ ಯೋಜನೆಯಾಗಿದೆ ಎಂದರು.
ಯೋಜನೆಗೆ ಚಾಲನೆ ನೀಡುತ್ತಿದ್ದಂತೆ ಬಿಹಾರ ರಾಜ್ಯದ ಕಗಾರಿಯಾ ಜಿಲ್ಲೆಯ ತೆಲಿಹಾರ್ ಗ್ರಾಮದ ವಲಸೆ ಕಾರ್ಮಿಕರ ಜತೆ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು. ಈ ವೇಳೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಉಪಸ್ಥಿತರಿದ್ದರು.
ಲಾಕ್‍ಡೌನ್‍ನಿಂದಾಗಿ ಬೇರೆ ರಾಜ್ಯಗಳಲ್ಲಿ ಲಕ್ಷಾತರ ಕಾರ್ಮಿಕರು ಸಿಲುಕಿದ್ದರು. ಲಾಕ್‍ಡೌನ್ ಸಡಿಲಿಕೆ ಬಳಿಕ ವಲಸೆ ಕಾರ್ಮಿಕರನ್ನು ಅವರ ಊರುಗಳಿಗೆ ರೈಲು ಹಾಗೂ ಬಸ್‍ಗಳ ಮೂಲಕ ಕಳಿಸಿಕೊಡಲಾಗಿದೆ. ಹುಟ್ಟೂರಿಗೆ ತೆರಳಿದ ಬಳಿಕ ಅಲ್ಲೇ ಅವರ ಕೌಶಲ್ಯಕ್ಕೆ ತಕ್ಕಂತೆ ಉದ್ಯೋಗ ನೀಡಲು ಕೇಂದ್ರ ಸರ್ಕಾರ ಗರೀಬ್ ಕಲ್ಯಾಣ್ ರೋಜಗಾರ್ ಯೋಜನೆ ಆರಂಭಿಸಿದೆ.
ಈ ಯೋಜನೆಯಡಿ 6 ರಾಜ್ಯಗಳ 116 ಗ್ರಾಮಗಳಲ್ಲಿ ಕೆಲಸ ಇಲ್ಲದೆ ಪರದಾಡುತ್ತಿರುವ ಕಾರ್ಮಿಕರಿಗೆ ಪ್ರಯೋಜನವಾಗಲಿದೆ. ಮುಖ್ಯವಾಗಿ ಬಿಹಾರ, ಉತ್ತರ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಜಾರ್ಖಂಡ್ ಹಾಗೂ ಒಡಿಸ್ಸಾ ರಾಜ್ಯಗಳ 25 ಸಾವಿರ ವಲಸೆ ಕಾರ್ಮಿಕರಿಗೆ ಯೋಜನೆಯ ಲಾಭ ಸಿಗಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.








