ಹಿರಿಯ ನಾಗರಿಕರಿಗೆ ಇಲ್ಲಿದೆ ಮಹತ್ವದ ಮಾಹಿತಿ
ಸರ್ಕಾರ ಹಿರಿಯ ನಾಗರಿಕರಿಗೆ ಗುರುತಿನ ಚೀಟಿ ಸೌಲಭ್ಯ ಒದಗಿಸಿದ್ದು, ಮಾಹಿತಿಯ ಕೊರತೆಯಿಂದಾಗಿ ಬಹುತೇಕ ಹಿರಿಯ ನಾಗರಿಕರು ಈ ಸೌಲಭ್ಯದಿಂದ ವಂಚಿತರಾಗಿದ್ದಾರೆ. ನಗರ ಪ್ರದೇಶದ ಮತ್ತು ಶ್ರೀಮಂತ ವರ್ಗದ ಮಂದಿ ಮಾತ್ರ ಹೆಚ್ಚಿನ ಪ್ರಮಾಣದಲ್ಲಿ ಗುರುತಿನ ಚೀಟಿ ಪಡೆಯುತ್ತಿದ್ದು, ಗ್ರಾಮೀಣ ಭಾಗದ ಹಿರಿಯ ನಾಗರಿಕರು ಈ ಸೌಲಭ್ಯ ಪಡೆಯುವುದರಲ್ಲಿ ಹಿಂದುಳಿದಿದ್ದಾರೆ.
ಗುರುತಿನ ಚೀಟಿ ಸೌಲಭ್ಯದ ಪ್ರಯೋಜನ ಮತ್ತು ಪಡೆಯುವ ಮಾಹಿತಿಯನ್ನು ಕೆಳಗೆ ವಿವರಿಸಲಾಗಿದೆ.
ಸರಕಾರ 60 ವರ್ಷ ತುಂಬಿದ ಹಿರಿಯ ನಾಗರಿಕರಿಗೆ ಹಿರಿಯ ನಾಗರಿಕರ ಗುರುತಿನ ಚೀಟಿ ನೀಡುತ್ತಿದೆ. ಇದರ ವಿತರಣಾ ಜವಾಬ್ದಾರಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ವಹಿಸಿಕೊಂಡಿದ್ದು, ಪ್ರತಿ ತಾಲೂಕಿನಲ್ಲಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಅರ್ಹ ಪಲಾನುಭವಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಬಳಿಕ ಈ ಅರ್ಜಿಯು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಂಬಂಧ ಪಟ್ಟ ಅಧಿಕಾರಿಗಳ ಕೈಸೇರಿ ಅವರು ಮುಂದಿನ ಕ್ರಮಗಳನ್ನು ಕೈಗೊಳ್ಳುತ್ತಾರೆ. ನಂತರ ಉಪನಿರ್ದೇಶಕರ ಸಹಿಯುಳ್ಳ ಹಿರಿಯ ನಾಗರಿಕರ ಗುರುತಿನ ಚೀಟಿ ಅರ್ಹ ಫಲಾನುಭವಿಗಳ ಕೈ ಸೇರುತ್ತದೆ.
ಅರ್ಜಿ ಸಲ್ಲಿಸುವ ಬಗ್ಗೆ :
ಹಿರಿಯ ನಾಗರಿಕರ ಗುರುತಿನ ಚೀಟಿಗಾಗಿ ಅರ್ಜಿ ಎಂಬ ಸರಕಾರದ ಮುದ್ರೆಯುಳ್ಳ ಅರ್ಜಿ ನಮೂನೆಯು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಲಭ್ಯವಿದೆ.
ಅರ್ಹ ಫಲಾನುಭವಿಗಳು ಇದರಲ್ಲಿ ಹೆಸರು, ಹುಟ್ಟಿದ ದಿನಾಂಕ, ಮನೆ ದೂರವಾಣಿ ಸಂಖ್ಯೆ, ತುರ್ತು ಸಂದರ್ಭದಲ್ಲಿ ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ, ರಕ್ತದ ಗುಂಪು ಮೊದಲಾದ ವಿವರಗಳನ್ನು ಭರ್ತಿ ಮಾಡಬೇಕು.
ನಂತರ 2 ಭಾವಚಿತ್ರ, ಜನನ ದಿನಾಂಕವನ್ನು ದೃಢೀಕರಿಸುವ ದಾಖಲೆ ಪತ್ರದೊಂದಿಗೆ 50 ರೂ. ಪಾವತಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು.
ಹಿರಿಯ ನಾಗರಿಕರ ಗುರುತಿನ ಚೀಟಿಯ ಪ್ರಯೋಜನಗಳು
ಹಿರಿಯ ನಾಗರಿಕರು ಅಪರಿಚಿತ ಸ್ಥಳದಲ್ಲಿ ಅಪಘಾತ, ಆರೋಗ್ಯ ಸಮಸ್ಯೆ ಮತ್ತು ಇನ್ನಿತರ ತೊಂದರೆಗಳಿಗೆ ಒಳಗಾದರೆ ತುರ್ತು ಚಿಕಿತ್ಸೆ ನೀಡಲು ಈ ಗುರುತಿನ ಚೀಟಿ ನೆರವಾಗಲಿದೆ.
ಚೀಟಿಯಲ್ಲಿ ತುರ್ತು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ ಲಭ್ಯವಿರುವುದರಿಂದ ಕುಟುಂಬದವರನ್ನು ಸಂಪರ್ಕಿಸಲು ಇದರಿಂದ ಅನುಕೂಲವಾಗುತ್ತದೆ.
ರಕ್ತದ ಮಾದರಿಯ ಮಾಹಿತಿ ಕೂಡ ಗುರುತಿನ ಚೀಟಿಯಲ್ಲಿ ಇರುವುದರಿಂದ ತುರ್ತು ಸಂದರ್ಭದಲ್ಲಿ ರಕ್ತ ಬೇಕಾದರೆ ಪೂರೈಸಲು ಸಹಾಯವಾಗುತ್ತದೆ.
ಸರಕಾರಿ ಬಸ್, ರೈಲು, ಇಂಡಿಯನ್ ಏರ್‌ಲೈನ್ಸ್, ಏರ್ ಇಂಡಿಯಾ ಮುಂತಾದವುಗಳಲ್ಲಿ ರಿಯಾಯಿತಿ ಪಡೆಯಲು ಇದರಿಂದ ಸಹಕಾರಿಯಾಗುತ್ತದೆ.
ಅಷ್ಟೇ ಅಲ್ಲದೆ ಹೆತ್ತವರ ಮತ್ತು ಹಿರಿಯ ನಾಗರಿಕರ ಕಾಯಿದೆಯಡಿ ಪಡೆಯಬಹುದಾದ ಸವಲತ್ತುಗಳು, ಕೇಂದ್ರ ಹಾಗೂ ರಾಜ್ಯ ಸರಕಾರ ಹಿರಿಯ ನಾಗರಿಕರಿಗೆ ನೀಡುವ ಸೌಲಭ್ಯಗಳನ್ನು ಪಡೆಯಲು ಈ ಗುರುತಿನ ಚೀಟಿ ಬಹು ಉಪಯೋಗಿಯಾಗಿ ಬಳಕೆಯಾಗಲಿದೆ.