IND v BAN: ಇಂದು ಭಾರತ v ಬಾಂಗ್ಲಾದೇಶ ಕದನ: ಅನೌಪಚಾರಿಕ ಪಂದ್ಯಕ್ಕೆ ಬದಲಾವಣೆ ನಿರೀಕ್ಷೆ…
Today’s India v Bangladesh clash: Expected to change to informal match…
ಏಷ್ಯಾಕಪ್-2023 ಟೂರ್ನಿಯ ಸೂಪರ್-4ನ ಅಂತಿಮ ಪಂದ್ಯದಲ್ಲಿ ಭಾರತ ಹಾಗೂ ಬಾಂಗ್ಲಾದೇಶ ಮುಖಾಮುಖಿಯಾಗುತ್ತಿವೆ. ಉಭಯ ತಂಡಗಳಿಗೂ ಇದು ಅನೌಪಚಾರಿಕ ಪಂದ್ಯವಾಗಿದ್ದು, ಹೀಗಾಗಿ ಇಂದಿನ ಪಂದ್ಯಕ್ಕೆ ಭಾರತ ತಂಡದಲ್ಲಿ ಕೆಲವು ಬದಲಾವಣೆ ನಿರೀಕ್ಷಿಸಲಾಗಿದೆ.
ಸೂಪರ್-4 ಹಂತದಲ್ಲಿ ಪಾಕಿಸ್ತಾನ ಹಾಗೂ ಶ್ರೀಲಂಕಾ ವಿರುದ್ಧ ಗೆಲುವು ಸಾಧಿಸಿರುವ ಭಾರತ ಈಗಾಗಲೇ ಫೈನಲ್ ಪ್ರವೇಶಿಸಿದೆ. ಮತ್ತೊಂದೆಡೆ ಸೂಪರ್-4ನಲ್ಲಿ ಇದೇ ಎರಡು ತಂಡಗಳ ವಿರುದ್ಧ ಸೋಲು ಕಂಡಿರುವ ಬಾಂಗ್ಲಾದೇಶ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದೆ. ಹೀಗಾಗಿಯೇ ಇಂದಿನ ಈ ಪಂದ್ಯ ಉಭಯ ತಂಡಗಳಿಗೂ ಅನೌಪಚಾರಿಕವಾಗಿದ್ದು, ಈ ಹಿನ್ನೆಲೆಯಲ್ಲಿ ಇಂದಿನ ಪಂದ್ಯದಲ್ಲಿ ಭಾರತ ಪ್ಲೇಯಿಂಗ್ ಇಲವೆನ್‌ನಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆ ಇದೆ.
ಪ್ರಮುಖವಾಗಿ ಟೀಂ ಇಂಡಿಯಾದ ಬ್ಯಾಟಿಂಗ್ ವಿಭಾಗದಲ್ಲಿ ನಾಯಕ ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಅವರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಹೆಚ್ಚಿದೆ. ರೋಹಿತ್ ಶರ್ಮಾ ವಿಶ್ರಾಂತಿ ಪಡೆದಿದ್ದೇ ಆದಲ್ಲಿ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ನಾಯಕತ್ವದ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಒಂದೊಮ್ಮೆ ನಿರೀಕ್ಷೆಯಂತೆ ಈ ಮೂರು ಬ್ಯಾಟರ್‌ಗಳಿಗೆ ವಿಶ್ರಾಂತಿ ನೀಡಿದರೆ ಇವರ ಸ್ಥಾನದಲ್ಲಿ ತಿಲಕ್ ವರ್ಮ, ಸೂರ್ಯಕುಮಾರ್ ಯಾದವ್ ಹಾಗೂ ಶ್ರೇಯಸ್ ಅಯ್ಯರ್ ಅವರುಗಳು ಕಣಕ್ಕಿಳಿಯುವ ನಿರೀಕ್ಷೆ ಇದೆ.
ಇನ್ನೂ ತಂಡದ ಬೌಲಿಂಗ್ ವಿಭಾಗದಲ್ಲೂ ಬದಲಾವಣೆ ಮಾಡುವ ನಿರೀಕ್ಷೆ ಹೆಚ್ಚಾಗಿದ್ದು, ಪ್ರಮುಖವಾಗಿ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರಿಗೆ ವಿಶ್ರಾಂತಿ ನೀಡಿ ಅವರ ಸ್ಥಾನದಲ್ಲಿ ಮೊಹಮ್ಮದ್ ಶಮಿ ಅವರನ್ನ ಆಡಿಸುವ ಸಾಧ್ಯತೆ ಇದೆ. ಅಲ್ಲದೇ ಶ್ರೀಲಂಕಾ ವಿರುದ್ಧ ಆಡುವ ಅವಕಾಶ ಪಡೆದಿದ್ದ ಆಲ್ರೌಂಡರ್ ಅಕ್ಸರ್ ಪಟೇಲ್ ಅವರನ್ನ ಇಂದಿನ ಪಂದ್ಯದಿಂದ ಕೈಬಿಟ್ಟು, ಮತ್ತೋರ್ವ ಆಲ್ರೌಂಡರ್ ಶಾರ್ದೂಲ್ ಥಾಕೂರ್ ಅವರನ್ನ ಆಡಿಸುವ ನಿರೀಕ್ಷೆ ಕೂಡ ಇದೆ.








