ಏಷ್ಯನ್ ಗೇಮ್ಸ್ ಪುರುಷರ ಕ್ರಿಕೆಟ್ ಟೂರ್ನಿಯಲ್ಲಿ ನೇಪಾಳ ತಂಡ ಹಲವಾರು ವಿಶ್ವದಾಖಲೆಗಳನ್ನು ಪುಡಿ ಪುಡಿ ಮಾಡಿದೆ. ನೇಪಾಳ ತಂಡವು 20 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 314 ರನ್ ಗಳಿಸಿ ವಿಶ್ವ ದಾಖಲೆಗೆ ಮುನ್ನಡೆಯಾಗಿದೆ. ತಂಡವೊಂದು 300 ರನ್ ದಾಟಿದ್ದು ಇದೇ ಮೊದಲು.
ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ಗಳಿಸಿದ ದಾಖಲೆ ಮಾತ್ರವಲ್ಲದೆ ಅತ್ಯಂತ ವೇಗದ ಅರ್ಧ ಶತಕ ಕೂಡ ದಾಖಲಾಗಿದ್ದು ಟಿ20 ಇತಿಹಾಸದಲ್ಲಿ ಅತ್ಯಂತ ವೇಗದ ಶತಕದ ದಾಖಲೆ ಕೂಡ ಇದೇ ಪಂದ್ಯದಲ್ಲಿ ನಿರ್ಮಾಣವಾಗಿದೆ. ಟಾಸ್ ಗೆದ್ದ ಮಂಗೋಲಿಯಾ ತಂಡ ಎದುರಾಳಿಯನ್ನು ಮೊದಲಿಗೆ ಬ್ಯಾಟಿಂಗ್ಗೆ ಆಹ್ವಾನಿಸಿ ದೊಡ್ಡ ಎಡವಟ್ಟು ಮಾಡಿಕೊಂಡಿತ್ತು. ಮೊದಲ ಎರಡು ವಿಕೆಟ್ಗಳನ್ನು ಪಡೆಯುವವರೆಗೆ ಎಲ್ಲವೂ ಸರಿ ಇತ್ತು. ಆದರೆ 7.2 ಓವರ್ಗಳಾದಾಗ ನೇಪಾಳ 66 ರನ್ಗಳಿಗೆ 2ನೇ ವಿಕೆಟ್ ಕಳೆದುಕೊಂಡ ನಂತರ ಅಬ್ಬರದ ಬ್ಯಾಟಿಂಗ್ ಮುಂದುವರೆಯಿತು.
ಕುಶಾಲ್ ಮಲ್ಲ ಹಾಗೂ ನಾಯಕ ರೋಹಿತ್ ಪೌಡೆಲ್ ಸ್ಪೋಟಕ ಬ್ಯಾಟಿಂಗ್ ನಡೆಸಿದರು. ಕುಶಾಲ್ ಮಲ್ಲ ಟಿ20 ಕ್ರಿಕೆಟ್ನಲ್ಲಿ ಈವರೆಗೆ ಅತ್ಯಂತ ವೇಗದ ಶತಕ ದಾಖಲಿಸಿದ ದಾಖಲೆ ಹೊಂದಿದ್ದ ಭಾರತದ ರೋಹಿತ್ ಶರ್ಮಾ ಹಾಗೂ ಡೇವಿಡ್ ಮಿಲ್ಲರ್ ಹೆಸರಿನಲ್ಲಿದ್ದ ಮುರಿದಿದ್ದು ಕೇವಲ 34 ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. 12 ಸಿಕ್ಸರ್ ಹಾಗೂ 8 ಬೌಂಡರಿ ಬಾರಿಸಿದ್ದು 137 ರನ್ಗಳನ್ನು ಗಳಿಸಿ ಅಜೇಯರಾಗಿ ಉಳಿದಿದ್ದಾರೆ.
ಮತ್ತೋರ್ವ ಆಟಗಾರ ದೀಪೇಂದ್ರ ಸಿಂಗ್ ಐರಿ ಮತ್ತೋರ್ವ ಭಾರತೀಯನ ಹೆಸರಿನಲ್ಲಿದ್ದ ವಿಶ್ವದಾಖಲೆ ಕೂಡ ಮುರಿದಿದ್ದಾರೆ. ದೀಪೇಂದ್ರ ಸಿಂಗ್ ಕೇವಲ 9 ಎಸೆತಗಳಲ್ಲಿ ಅರ್ಧ ಶತಕ ಸಿಡಿಸುವ ಮೂಲಕ 16 ವರ್ಷಗಳ ಹಿಂದಿನ ಯುವರಾಜ್ ಸಿಂಗ್ ಅವರ ಹೆಸರಿನಲ್ಲಿದ್ದ ವಿಶ್ವದಾಖಲೆ ಮುರಿದಿದ್ದಾರೆ. ಯುವರಾಜ್ ಸಿಂಗ್ 2007ರ ವಿಶ್ವಕಪ್ನಲ್ಲಿ ಕೇವಲ 12 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿ ಅಬ್ಬರಿಸಿದ್ದರು.








