ಬೆಂಗಳೂರು: ಈದ್ ಮಿಲಾದ್ (Eid Milad) ಹಬ್ಬ ಬಹುತೇಕ ಕಡೆ ಸಂಭ್ರಮದಿಂದ ನಡೆದಿದೆ. ಆದರೆ, ನಗರದ ಕಾರ್ಪೋರೇಷನ್ ಸರ್ಕಲ್ ಬಳಿ ಯುವಕರ ನಡುವೆ ವಾಗ್ವಾದ ನಡೆದು ಪರಸ್ಪರ ಹೊಡೆದಾಡಿಕೊಂಡ ಘಟನೆ ನಡೆದಿದೆ.
ಸಡಗರದಿಂದ ಮೊಹಮ್ಮದ್ ಪೈಗಂಬರ್ ಅವರ ಜನ್ಮ ದಿನಾಚರಣೆಯನ್ನು (ಈದ್ ಮಿಲಾದ್) ರಾಜ್ಯದಲ್ಲಿ ಆಚರಿಸಲಾಗಿದೆ. ಹಲವೆಡೆ ಮೆರವಣಿಗೆ ನಡೆಸಿ ಸಿಹಿ ಹಂಚಿ ಸಂಭ್ರಮಿಸಿದರು. ಅದಾಗ್ಯೂ, ಕೆಲವೆಡೆ ಅಹಿತಕರ ಘಟನೆಗಳು ನಡೆದಿವೆ.
ಬೆಂಗಳೂರಿನಲ್ಲಿ ಯುವಕರ ನಡುವೆ ಮಾರಾಮಾರಿ ನಡೆದರೆ, ಇತ್ತ ವಿಜಯಪುರ ನಗರದ ಶಿವಾಜಿ ವೃತ್ತದಲ್ಲಿ ಬಿಜೆಪಿ ಶಾಸಕ ಬಸನಗೌಡಪಾಟೀಲ್ ಯತ್ನಾಳ್ ಅವರ ಭಾವಚಿತ್ರ ಇದ್ದ ಬ್ಯಾನರ್ ಹಸಿರು ಬಾವುಟದಿಂದ ಚುಚ್ಚಿ ಹರಿದು ಹಾಕಿದ ಘಟನೆ ನಡೆದಿದೆ.
ಗಣೇಶ ಹಬ್ಬಕ್ಕೆ ಶುಭಕೋರಿ ಯತ್ನಾಳ್ ಅವರ ಭಾವಚಿತ್ರ ಇರುವ ಬ್ಯಾನರ್ ಅಳವಡಿಸಲಾಗಿತ್ತು. ಆದರೆ ಈದ್ ಮೆರವಣಿಗೆಯಲ್ಲಿ ಸಾಗುತ್ತಿದ್ದ ಯುವಕ ಚುಚ್ಚಿ ಹರಿದು ಹಾಕಿದ್ದಾನೆ. ಈ ದೃಶ್ಯವನ್ನು ಮೊಬೈಲ್ ನಲ್ಲಿ ಸೆರೆಯಾಗಿದ್ದು, ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.
ಕೋಲಾರ ನಗರದ ಕ್ಲಾಕ್ ಟವರ್ನಲ್ಲಿ ವಿವಾದಿತ ಕತ್ತಿ ಸಂದೇಶ ಬಿಜೆಪಿಗರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ತೆಗೆಯುವಂತೆ ಸಂಸದ ಎಸ್.ಮುನಿಸ್ವಾಮಿ ಎಚ್ಚರಿಕೆ ನೀಡಿದ್ದಾರೆ.








