ಕುಂಗ್ ಫ್ಲೂ ಎಂದು ಕೊರೊನಾಗೆ ಹೊಸ ಹೆಸರು ಸೂಚಿಸಿದ ಟ್ರಂಪ್
ವಾಷಿಂಗ್ಟನ್, ಜೂನ್ 22: ಕೊರೊನಾ ಸೋಂಕಿನ ಉಗಮ ಚೀನಾದ ಮೇಲೆ ಮತ್ತೊಮ್ಮೆ ವಾಗ್ದಾಳಿ ನಡೆಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊರೊನಾಗೆ ಹೊಸ ಹೆಸರನ್ನು ಸೂಚಿಸಿದ್ದಾರೆ.
ವಿಶ್ವಕ್ಕೆ ಕೊರೊನಾ ವ್ಯಾಪಕವಾಗಿ ಹರಡಲು ಚೀನಾವೇ ಕಾರಣವೆಂದು ಬಹಿರಂಗವಾಗಿಯೇ ಆರೋಪಿಸಿರುವ ಡೊನಾಲ್ಡ್ ಟ್ರಂಪ್, ಚೀನಾ ಕುಂಗ್ ಫೂ ಮಾತ್ರವಲ್ಲ, ಕುಂಗ್ ಫ್ಲೂ ಹರಡಿದ ದೇಶ ಕೂಡ ಎಂದು ಟೀಕಿಸಿದ್ದಾರೆ. ಕೊರೊನಾ ವೈರಸ್ ಗೆ ಇಷ್ಟು ದಿನ ಚೈನೀಸ್ ವೈರಸ್, ವುಹಾನ್ ವೈರಸ್ ಎಂದು ಕರೆಯುತ್ತಿದ್ದ ಟ್ರಂಪ್ ಈ ಬಾರಿ ಕುಂಗ್ ಫ್ಲೂ ಎಂದು ಹೊಸ ಹೆಸರನ್ನು ಇಟ್ಟಿದ್ದಾರೆ.
ಒಕ್ಲಾಹೋಮಾದ ತುಲ್ಸಾದಲ್ಲಿ ನಡೆದ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮೊದಲ ಪ್ರಚಾರ ಭಾಷಣದಲ್ಲಿ ಚೀನಾ ವಿರುದ್ಧ ವಾಗ್ದಾಳಿ ನಡೆಸಿದ ಡೊನಾಲ್ಡ್ ಟ್ರಂಪ್ ಕೊರೊನಾ ವೈರಸ್ ಅನ್ನು ಹೊಸ ಹೆಸರಿನಿಂದ ಕರೆಯಬೇಕೆಂದು ಹೇಳಿದ ಟ್ರಂಪ್, ಈ ವೈರಸ್ ಗೆ ಕುಂಗ್ ಫ್ಲೂ ಎನ್ನುವುದು ಸೂಕ್ತವಾದ ಹೆಸರು. ಚೀನಾ ಸಮರ ಕಲೆಗಳ ಕುಂಗ್ ಫೂನಂತೆಯೇ ಕುಂಗ್ ಫ್ಲೂ ಅನ್ನು ಹುಟ್ಟು ಹಾಕಿದೆ ಎಂದು ತಮ್ಮ ಭಾಷಣದಲ್ಲಿ ಹೇಳಿದರು. ಕೊರೊನಾ ಸೋಂಕಿಗೆ ಒಂದಲ್ಲ, ಎರಡಲ್ಲ ಬೇಕಾದರೆ 20 ಹೆಸರನ್ನು ಸೂಚಿಸಬಲ್ಲೆ ಎಂದ ಟ್ರಂಪ್ ಕೊರೊನಾ ಸಂಕಷ್ಟದ ಈ ಸಮಯದಲ್ಲಿ ಚೀನಾ ತನ್ನ ನೆರೆದೇಶಗಳ ಜೊತೆ ಗಡಿ ವಿವಾದಗಳನ್ನು ಸೃಷ್ಟಿಸುತ್ತಿದೆ ಎಂದು ಹೇಳಿದರು.
ಅಮೆರಿಕದಲ್ಲಿ ಕೊರೊನಾ ಸೋಂಕಿಗೆ 1 ಲಕ್ಷ ಮಂದಿ ಮೃತಪಟ್ಟಿದ್ದು, 2 ಮಿಲಿಯನ್ ಸೋಂಕಿತರಿದ್ದಾರೆ. ಚೀನಾ ತನ್ನ ದೇಶದಲ್ಲಿ ನಿಜವಾಗಿಯೂ ಎಷ್ಟು ಜನ ಕೊರೊನಾ ಸೋಂಕಿನಿಂದ ಮೃತಪಟ್ಟರು ಎಂಬ ಲೆಕ್ಕವನ್ನು ಜಗತ್ತಿಗೆ ಬಹಿರಂಗ ಪಡಿಸಲಿ ಎಂದು ಸವಾಲನ್ನು ಎಸೆದರು.