ವೆಲ್ಲಿಂಗ್ಟನ್: ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ ನಲ್ಲಿ 165 ರನ್ ಗೆ ಆಲೌಟ್ ಆಗಿದೆ. ಸದ್ಯ ಬ್ಯಾಟಿಂಗ್ ಆರಂಭಿಸಿರುವ ನ್ಯೂಜಿಲೆಂಡ್ ಚಹಾ ವಿರಾಮಕ್ಕೆ 2 ವಿಕೆಟ್ ನಷ್ಟಕ್ಕೆ 116ರನ್ ಗಳಿಸಿದೆ. ಟಾಮ್ ಬ್ಲಂಡೆಲ್ 30 ರನ್, ಟಾಮ್ ಲಾಥಂ 11 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದ್ದಾರೆ. ಇಶಾಂತ್ ಶರ್ಮಾ 17 ರನ್ ಕೊಟ್ಟು ಈ ಎರಡು ವಿಕೆಟ್ ಗಳಿಸಿದ್ದಾರೆ. ಕೇನ್ ವಿಲಿಯಮ್ಸನ್ 46 ರನ್ ಮತ್ತು ರಾಸ್ ಟೇಲರ್ 22 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.
ಇದಕ್ಕೂ ಮುನ್ನ ಎರಡನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದ ಉಪನಾಯಕ ಅಜಿಂಕ್ಯಾ ರಹಾನೆ ಹಾಗೂ ರಿಷಭ್ ಪಂತ್ ಆರಂಭದಲ್ಲಿ ಅಬ್ಬರಿಸುವ ಸೂಚನೆ ನೀಡಿದರು. ಎರಡನೇ ದಿನ ಬೆಳಗ್ಗೆ ರಿಷಭ್ ಪಂತ್ ಸಿಕ್ಸರ್ ಸಿಡಿಸುವ ಮೂಲಕ ಉತ್ತಮ ಆರಂಭ ನೀಡಿದರು. ಆದರೆ, ಅಜಿಂಕ್ಯಾ ರಹಾನೆ ಅವರಿಗೆ ಜತೆಯಾಗಿ ಆಡುವ ಭರದಲ್ಲಿ ರನ್ ಔಟ್ ಆಗಿ ಪೆವಿಲಿಯನ್ ಕಡೆ ಹೆಜ್ಜೆ ಹಾಕಿದರು. ಅವರ ಸ್ಕೋರ್ 19 ರನ್. ಅಜಿಂಕ್ಯಾ ರಹಾನೆ 46 ರನ್ , ಮೊಹಮ್ಮದ್ ಶಮಿ 21 ರನ್ ಗಳಿಸಿ ಟೀಂ ಇಂಡಿಯಾದ ಸ್ಕೋರ್ 150ರ ಗಡಿ ದಾಟುವಂತೆ ನೋಡಿಕೊಂಡರು. ಮೊಹಮ್ಮದ್ ಶಮಿ ಒಂಭತ್ತನೇ ವಿಕೆಟ್ ಜೊತೆಯಾಟದಲ್ಲಿ ಇಶಾಂತ್ ಶರ್ಮಾ ಜತೆಗೂಡಿ 22 ರನ್ ಸೇರಿಸಿದ್ದರು.
ಇನ್ನು ನ್ಯೂಜಿಲೆಂಡ್ ಪರ ಕೈಲ್ ಜೇಮಿಸನ್ ಮತ್ತು ಟಿಮ್ ಸೌತಿ ತಲಾ 4 ವಿಕೆಟ್ ಉರುಳಿಸಿ ಗಮನಸೆಳೆದರು.








