ಹಾಸನ: ವೃದ್ಧೆಯ (Old Woman) ಮೇಲೆ ಅತ್ಯಾಚಾರ (Rape) ನಡೆಸಿದ ಪಾಪಿಗೆ 10 ವರ್ಷ ಕಠಿಣ ಕಾರಾಗೃಹ ಶಿಕ್ಷೆಯನ್ನು ಕೋರ್ಟ್ ವಿಧಿಸಿದೆ.
ಅಲ್ಲದೇ, ಶಿಕ್ಷೆಯೊಂದಿಗೆ 10 ಸಾವಿರ ರೂ. ದಂಡ (Penalty) ವಿಧಿಸಿ ಹಾಸನದ (Hassan) ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (Court) ತೀರ್ಪು ಪ್ರಕಟಿಸಿತು.
ತಾಲೂಕಿನ ಕಟ್ಟಾಯ ಹೋಬಳಿ ಬನವಾಸೆ ಗ್ರಾಮದ ರಮೇಶ್ ಎಂಬ ವ್ಯಕ್ತಿಯೇ ವೃದ್ಧೆಯ ಮೇಲೆ ಅತ್ಯಾಚಾರ ನಡೆಸಿದ್ದು ಸಾಬೀತಾದ ಹಿನ್ನೆಲೆಯಲ್ಲಿ ಶಿಕ್ಷೆಗೆ ಒಳಗಾಗಿದ್ದಾನೆ. 2020ರ ಜುಲೈ 29ರಂದು ರಾತ್ರಿ ರಮೇಶ್ 69 ವರ್ಷದ ವೃದ್ಧೆಯ ಮನೆಯ ಛಾವಣಿ ಕಿಟಕಿಯನ್ನು ಕಲ್ಲಿನಿಂದ ಒಡೆದು ಹಾಕಿ ಮನೆಯೊಳಗೆ ನುಗ್ಗಿ, ವೃದ್ಧೆಯ ಕುತ್ತಿಗೆ ಹಿಸುಕಿ, ದೇಹದ ನಾನಾ ಭಾಗಗಳಿಗೆ ಕಚ್ಚಿ ಅತ್ಯಾಚಾರ ನಡೆಸಿ ಪರಾರಿಯಾಗಿದ್ದ. ಈ ಕುರಿತು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪೊಲೀಸರು ನ್ಯಾಯಾಲಯಕ್ಕೆ ಆರೋಪಿಯ ವಿರುದ್ಧ ಐಪಿಸಿ ಕಲಂ 448, 323, 341, 376, 506 ಅಡಿಯಲ್ಲಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಹಾಸನದ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಎ.ಹಿದಾಯತ್ ಉಲ್ಲಾ ಷರೀಫ್ ಅವರು ಪ್ರಕರಣದ ಎಲ್ಲಾ ಸಾಕ್ಷಿದಾರರು ಪೂರಕವಾಗಿ ಸಾಕ್ಷ್ಯ ನುಡಿದಿರುವ ಹಿನ್ನೆಲೆಯಲ್ಲಿ ಆರೋಪಿಯ ಮೇಲಿನ ದೋಷಾರೋಪಣೆ ಸಾಬೀತಾಗಿದೆ ಎಂದು ತೀರ್ಮಾನಿಸಿ, ರಮೇಶ್ಗೆ ಭಾರತೀಯ ದಂಡ ಸಂಹಿತೆ ಕಲಂ 376, 506, 323ರ ಅಡಿ 10 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ ದಂಡ ವಿಧಿಸಿ ತೀರ್ಪು ನೀಡಿದ್ದು, ಸಂತ್ರಸ್ತೆಗೆ ಪರಿಹಾರ ನೀಡುವಂತೆ ಆದೇಶಿಸಲಾಗಿದೆ.