ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಪತ್ನಿ ಮತ್ತು ಪುತ್ರಿಗೂ ಕೊರೊನಾ ಸೋಂಕು
ಬೆಂಗಳೂರು, ಜೂನ್ 23: ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರ ಪತ್ನಿ ಹಾಗೂ ಮಗಳಿಗೆ ಕೊರೊನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಕುರಿತು ಸಚಿವ ಸುಧಾಕರ್ ಅವರು ಟ್ವಿಟರ್ನಲ್ಲಿ ಮಾಹಿತಿ ನೀಡಿದ್ದು, ನಮ್ಮ ಕುಟುಂಬದ ಕೋವಿಡ್ ಪರೀಕ್ಷಾ ವರದಿ ಬಂದಿದ್ದು ನನ್ನ ಪತ್ನಿ ಹಾಗು ಮಗಳಿಗೆ ಕೊರೋನಾ ಪಾಸಿಟಿವ್ ಬಂದಿದೆ.ಅವರಿಬ್ಬರು ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನನ್ನ ಇಬ್ಬರು ಗಂಡುಮಕ್ಕಳು ಮತ್ತು ನನಗೆ ಕೊರೋನಾ ನೆಗೆಟಿವ್ ಬಂದಿದೆ. ನಮ್ಮೆಲ್ಲರ ಒಳಿತಿಗಾಗಿ ಪ್ರಾರ್ಥಿಸಿದ, ಶುಭಕೋರಿದ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ ಎಂದು ಬರೆದಿದ್ದಾರೆ.
ಈ ಮೊದಲು ಸುಧಾಕರ್ ಅವರ ಮನೆ ಕೆಲಸದವರಿಗೆ ಸೋಂಕು ದೃಢಪಟ್ಟಿತ್ತು. ನಿನ್ನೆ ಸುಧಾಕರ್ ಅವರ 82 ವರ್ಷ ದ ತಂದೆಯ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದ್ದು, ಕೊರೊನಾ ಪರೀಕ್ಷೆಗೆ ಒಳಪಡಿಸಿದಾಗ ಅವರಿಗೆ ಕೂಡ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಬಳಿಕ ಮನೆಯವರನ್ನೆಲ್ಲಾ ಕೊರೊನಾ ಪರೀಕ್ಷೆಗೆ ಒಳಪಡಿಸಿದ್ದು, ಇದೀಗ ಸುಧಾಕರ್ ಪತ್ನಿ ಮತ್ತು ಪುತ್ರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.