ಟೆಲ್ ಅವೀವ್: ಗಾಜಾ ಪಟ್ಟಿಯಲ್ಲಿನ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ (Israel) ಸೇನೆಯಿಂದ ಭೀಕರ ದಾಳಿ ನಡೆದಿದೆ. ಈ ವಾಯುದಾಳಿಯಲ್ಲಿ (Airstrikes) ಹಮಾಸ್ ಉಗ್ರರ ಟಾಪ್ ಕಮಾಂಡರ್ ಇಬ್ರಾಹಿಂ ಬ್ಯಾರಿ ಸೇರಿದಂತೆ ಸುಮಾರು 60 ಜನ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಈ ದಾಳಿಯಲ್ಲಿ ಅಲ್ ಜಜೀರಾ (Al Jazeera) ಕುಟುಂಬದ 19 ಜನ,ಸುಮಾರು 50 ಮಂದಿ ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ. ಅಲ್ ಜಜೀರಾ ಎಕ್ಸ್ ಖಾತೆಯಲ್ಲಿ ಈ ದಾಳಿ ಖಂಡಿಸಿದೆ. ಬ್ಯಾರಿಯನ್ನು ತೊಡೆದುಹಾಕಲು ನಿರಾಶ್ರಿತರ ಶಿಬಿರವನ್ನು ಧ್ವಂಸ ಮಾಡಿರುವುದಾಗಿ ಇಸ್ರೇಲ್ನ ರಕ್ಷಣಾ ಪಡೆಗಳು ತಿಳಿಸಿವೆ. ಕನಿಷ್ಠ 47 ಮೃತ ದೇಹಗಳು ಪತ್ತೆಯಾಗಿವೆ ಎಂದು ಎನ್ನಲಾಗಿದೆ.
ಹಮಾಸ್ ಭಯೋತ್ಪಾದಕ ಗುಂಪಿನ ಮಿಲಿಟರಿ ವಿಭಾಗವಾಗಿರುವ ಎಝೆಡಿನ್ ಅಲ್-ಕಸ್ಸಾಮ್ ಬ್ರಿಗೇಡ್ಸ್, ಗಾಜಾವನ್ನು ಇಸ್ರೇಲಿ ಪಡೆಗಳು ಸ್ಮಶಾನವಾಗಿ ಮಾಡುವುದಾಗಿ ಪ್ರತಿಜ್ಞೆ ಮಾಡಿದೆ. ಈಗಾಗಲೇ ಇಸ್ರೇಲ್ ಗಾಜಾ ನಿವಾಸಿಗಳಿಗೆ ಪ್ರದೇಶ ತೊರೆಯುವಂತೆ ಎಚ್ಚರಿಕೆ ನೀಡಿದೆ.








