ಹಾಸನ: ಕಿರಾತಕರು ಬೆಂಗಳೂರಿನಲ್ಲಿ ಬಾಲಕನನ್ನು ಅಪಹರಿಸಿ ಹಾಸನದಲ್ಲಿ ಬಿಟ್ಟು ಹೋದ ಘಟನೆಯೊಂದು ನಡೆದಿದೆ.
ವಿಳಾಸ ಕೇಳುವ ನೆಪದಲ್ಲಿ ಪ್ರಜ್ಞೆ ತಪ್ಪಿಸಿ, ಬಾಲಕನನ್ನು ಅಪಹರಿಸಿದ್ದಾರೆ. ನಂತರ ಬಾಲಕನನ್ನು ಹಾಸನದಲ್ಲಿ ಬಿಟ್ಟು ಹೋಗಿದ್ದಾರೆ.
ಅನಂತಪುರದ ಕೃಷ್ಣೇಗೌಡರ ಮಗ, ನಾಗಾರ್ಜುನ ಪಿಯು ಕಾಲೇಜಿನಲ್ಲಿ ಓದುತ್ತಿದ್ದ ವಿದ್ಯಾರ್ಥಿ ಚಿರಾಗ್ (17) ನನ್ನೇ ಅಪಹರಿಸಿದ್ದಾರೆ. ಯುವಕ ಕಾಲೇಜಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಕಿಡ್ನಾಪ್ ಮಾಡಿದ್ದಾರೆ ಎನ್ನಲಾಗಿದೆ.
ಬಾಲಕನು ಕಾಲೇಜಿಗೆ ತೆರಳುವ ವೇಳೆ ಪ್ರಜ್ಞೆ ತಪ್ಪಿ ಎಚ್ಚರಗೊಂಡಾಗ ಹಾಸನ ಜಿಲ್ಲೆಯ ಅರಕಲಗೂಡು ಸಮೀಪದಲ್ಲಿದ್ದ ಎನ್ನಲಾಗಿದೆ. ಕೂಡಲೇ ಎಚ್ಚರವಾಗಿ ಸಮೀಪದ ಮನೆ ಬಳಿ ತೆರಳಿ ಪೋಷಕರಿಗೆ ಯುವಕ ಫೋನ್ ಮಾಡಿದ್ದಾನೆ. ಕೂಡಲೆ ಹಾಸನಕ್ಕೆ ಬಂದು ಮಗನನ್ನು ಪೋಷಕರು ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಸ್ವಸ್ಥಗೊಂಡಿದ್ದ ಯುವಕನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಬೆಂಗಳೂರಿನ ಯಲಹಂಕ ಪೊಲೀಸ್ ಠಾಣೆಗೆ ಕಿಡ್ನಾಪ್ ಬಗ್ಗೆ ದೂರು ನೀಡಲಾಗಿದೆ.








