ಹಾಸನ: ಅಮ್ಮನನ್ನು ಪದೇ ಪದೇ ನಿಂದಿಸುತ್ತಿದ್ದಾನೆ ಎಂಬ ಕಾರಣಕ್ಕೆ ಅಳಿಯನೇ, ಮಾವನನ್ನು ಕೊಲೆ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ಹಾಸನ (Hassan) ಜಿಲ್ಲೆಯ ಅರಸೀಕೆರೆ ತಾಲೂಕಿನ ಬಾಣಾವರ ಹೋಬಳಿ ಗಂಜಿಗೆರೆ ಗ್ರಾಮದಲ್ಲಿ ನಡೆದಿದ್ದು, ಅಳಿಯನೇ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಪ್ರಭುಸ್ವಾಮಿ (50) ಕೊಲೆಯಾದ ಮಾವ. ಅಳಿಯ ಅಜಯ್ (22) ಕೊಲೆ ಮಾಡಿದ ಯುವಕ. ಕೊಲೆಯಾದ ಪ್ರಭುಸ್ವಾಮಿ ತಂಗಿ ಸಾವಿತ್ರಮ್ಮ ಏಳೆಂಟು ವರ್ಷಗಳ ಹಿಂದೆ ಗಂಡನನ್ನು ಬಿಟ್ಟು ತವರು ಮನೆಯಲ್ಲಿ ನೆಲೆಸಿದ್ದಳು. ಗಂಜಿಗೆರೆಯಲ್ಲಿ ಅಕ್ಕಪಕ್ಕದ ಮನೆಯಲ್ಲಿ ಅಣ್ಣ ಹಾಗೂ ತಂಗಿ ವಾಸಿಸುತ್ತಿದ್ದರು. ಆದರೆ, ಪ್ರಭುಸ್ವಾಮಿ ಹಾಗೂ ಸಹೋದರಿ ಸಾವಿತ್ರಮ್ಮ ಜೊತೆ ಆಗಾಗ ಜಗಳ ನಡೆಯುತ್ತಿತ್ತು.
ಮದ್ಯಸೇವಿಸಿ ಬರುತ್ತಿದ್ದ ಪ್ರಭುಸ್ವಾಮಿ, ತಂಗಿ ಹಾಗೂ ಆಕೆಯ ಮಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ. ಇದರಿಂದ ಸಾವಿತ್ರಮ್ಮ ಬೇಸತ್ತು ಹೋಗಿದ್ದಳು. ಮಾವ ಮಾಡುವ ಕೃತ್ಯದ ಕುರಿತು ಮಗನಿಗೆ ತಾಯಿ ಹೇಳಿದ್ದಳು. ಈ ಕೃತ್ಯ ನಡೆದ ದಿನ ತಂಗಿಯೊಂದಿಗೆ ಜಗಳವಾಡಿ ಕೆಟ್ಟ ಪದಗಳಿಂದ ಪ್ರಭುಸ್ವಾಮಿ ನಿಂದಿಸಿದ್ದ ಎನ್ನಲಾಗಿದೆ.
ವಿಷಯ ಗೊತ್ತಾಗುತ್ತಿದ್ದಂತೆ ಗಂಜಿಗೆರೆ ಗ್ರಾಮಕ್ಕೆ ಆಗಮಿಸಿದ ಅಜಯ್, ಮನೆಯಲ್ಲಿಯಿದ್ದ ಮಾವ ಪ್ರಭುಸ್ವಾಮಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಬಾಣಾವರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.








