ವೈದ್ಯ ವೃತ್ತಿ ದೇವರಿಗೆ ಸಮಾನವಾದ ವೃತ್ತಿ ಎಂದೇ ಎಲ್ಲರೂ ಅಂದುಕೊಂಡಿದ್ದಾರೆ. ಹೀಗಾಗಿಯೇ ಜನರು ವೈದ್ಯರನ್ನು ದೇವರಿಗೆ ಸಮಾನವಾಗಿ ಕಾಣುತ್ತಾರೆ. ಆದರೆ, ಇಲ್ಲೊಂದು ಪ್ರದೇಶದಲ್ಲಿ ಚಹಾ ನೀಡಿಲ್ಲ ಎಂಬ ಕಾರಣಕ್ಕೆ ವೈದ್ಯರು ಶಸ್ತ್ರ ಚಿಕಿತ್ಸೆಯನ್ನೇ ಅರ್ಧಕ್ಕೆ ಬಿಟ್ಟು ಹೋಗಿರುವ ಘಟನೆ ನಡೆದಿದೆ.
ಈ ಘಟನೆ ನಾಗ್ಪುರದಲ್ಲಿ ನಡೆದಿದೆ. ಮಹಿಳೆಯೊಬ್ಬರು ಶಸ್ತ್ರ ಚಿಕಿತ್ಸೆಗೆಂದು ಆಸ್ಪತ್ರೆಗೆ ಆಗಮಿಸಿದ್ದರು. ಈ ಮಹಿಳೆಗೆ ವೈದ್ಯರು ಅರವಳಿಕೆ ಚುಚ್ಚುಮದ್ದು ನೀಡಿ, ಪ್ರಜ್ಞೆ ತಪ್ಪಿಸಿದ್ದರು. ಆದರೆ, ಶಸ್ತ್ರ ಚಿಕಿತ್ಸೆಗೂ ಮುನ್ನ ಚಹಾ ಹಾಗೂ ಬಿಸ್ಕತ್ತು ಸಿಗಲಿಲ್ಲ ಎಂಬ ಕಾರಣಕ್ಕೆ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡದೆ ಆಸ್ಪತ್ರೆಯಿಂದ ಮರಳಿ ಹೋಗಿದ್ದಾರೆ.
ವೈದ್ಯರ ಈ ನಡೆಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಮೊದಲೇ ಸೌಲಭ್ಯಗಳ ಕೊರತೆ ಇದೆ ಈ ನಡುವೆ ವೈದ್ಯರು ಸೂಕ್ಷ್ಮತೆ ಇಲ್ಲದೆ ನಡೆದುಕೊಂಡಿರುವುದರಿಂದಾಗಿ ತೀವ್ರ ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ. ಹೀಗಾಗಿ ಕುಟುಂಬಸ್ಥರು ಗಲಾಟೆ ನಡೆಸಿದ್ದಾರೆ. ನಂತರ ಬೇರೊಬ್ಬ ವೈದ್ಯರನ್ನು ಕರೆಯಿಸಿ ಶಸ್ತ್ರ ಚಿಕಿತ್ಸೆ ಮಾಡಿಸಲಾಗಿದೆ. ಕೆಲಕಾಲ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು.