ಚಂಡಿಗಢ: ಬೀದಿ ನಾಯಿ ಒಂದು ಬಾರಿ ಕಚ್ಚಿದರೆ ರಾಜ್ಯ ಸರ್ಕಾರವು ಸಂತ್ರಸ್ತ ವ್ಯಕ್ತಿಗೆ ಕನಿಷ್ಠ 10 ಸಾವಿರ ರೂ. ಪರಿಹಾರ ನೀಡಬೇಕು ಎಂದು ಪಂಜಾಬ್ ಹಾಗೂ ಹರ್ಯಾಣ ಹೈಕೋರ್ಟ್ (Punjab and Haryana High Court) ಮಹತ್ವದ ಆದೇಶ ಹೊರಡಿಸಿದೆ.
ಬೀದಿ ನಾಯಿ ಅಥವಾ ದನಗಳಂತಹ ಬೀದಿ ಪ್ರಾಣಿಗಳ ದಾಳಿ ಪ್ರಕರಣದ ಸಂದರ್ಭದಲ್ಲಿ ಪರಿಹಾರ ಪಾವತಿಸುವ ವಿಚಾರದಲ್ಲಿ ಪ್ರಾಥಮಿಕವಾಗಿ ಜವಾಬ್ದಾರಿಯನ್ನು ರಾಜ್ಯ ಸರ್ಕಾರವೇ ಹೊರಬೇಕು. ಹಲ್ಲಿನ ಗುರುತಿಗೆ (Per Teeth Mark) ಕನಿಷ್ಠ 10,000 ರೂ. ಮತ್ತು 0.2 ಸೆಂ.ಮೀ ಗಾಯಕ್ಕೆ ಕನಿಷ್ಠ 20 ಸಾವಿರ ರೂ. ಪರಿಹಾರ ನೀಡಬೇಕು ಎಂದು ಘೋಷಿಸಿದೆ.
ಬಿಡಾಡಿ ಪ್ರಾಣಿಗಳ ದಾಳಿಗೆ ಸಂಬಂಧಿಸಿದ 193 ಅರ್ಜಿಗಳ ವಿಚಾರಣೆ ನಡೆಸಿದ ಕೋರ್ಟ್ ಈ ಆದೇಶ ಪ್ರಕಟಿಸಿದ್ದು, ಆ ನಂತರ ಏಜೆನ್ಸಿ/ ಖಾಸಗಿ ವ್ಯಕ್ತಿಯಿಂದ ರಾಜ್ಯ ಸರ್ಕಾರ ವಸೂಲಿ ಮಾಡಿ ಪರಿಹಾರ ಪಾವತಿಸಬೇಕು ಎಂದು ಆದೇಶಿಸಿದೆ.








