ಬೆಂಗಳೂರು: ನಗರದಲ್ಲಿ ಸಂಚಾರ ಮಾಡುವ ಮೆಟ್ರೋದಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ನಡೆದಿದೆ. ಈ ಘಟನೆಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.
ಜನದಟ್ಟಣೆ ಇದ್ದ ಸಂದರ್ಭದಲ್ಲಿ ಮೆಟ್ರೋದಲ್ಲಿ (Namma Metro) ಯುವತಿಗೆ (Young Woman) ಲೈಂಗಿಕ ಕಿರುಕುಳ ನೀಡಲಾಗಿದೆ ಎನ್ನಲಾಗಿದ್ದು, ಈ ಕೃತ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ (Social Media) ಭಾರೀ ಆಕ್ರೋಶ ವ್ಯಕ್ತವಾಗಿದೆ. ಆರೋಪಿಗಳನ್ನು ಬಂಧಿಸಿ, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನೆಟ್ಟಿಗರು ಆಗ್ರಹಿಸಿದ್ದರು.
ಸೋಮವಾರ ಬೆಳಿಗ್ಗೆ ಜನಜಂಗುಳಿ ಇರುವ ಮೆಜೆಸ್ಟಿಕ್ ಮೆಟ್ರೋದಲ್ಲಿ ಘಟನೆ ನಡೆದಿದೆ. ಯುವತಿ ಪ್ರತಿ ದಿನ ಕಾಲೇಜಿಗೆ ಬಸ್‌ನಲ್ಲೇ ತೆರಳುತ್ತಿದ್ದರು. ಆದರೆ, ಸೋಮವಾರ ಮೆಟ್ರೋದಲ್ಲಿ ಸಂಚರಿಸಲು ಬಂದಿದ್ದಾರೆ. ಮೆಟ್ರೊ ಏರುವಾಗ ದಟ್ಟಣೆ ಇದೆ. ಕೆಂಪು ಅಂಗಿ ಧರಿಸಿದ್ದ ವ್ಯಕ್ತಿಯೊಬ್ಬ ಹಿಂದಿನಿಂದ ಯುವತಿಯನ್ನು ಸ್ಪರ್ಶಿಸಿದ್ದಾನೆ. ಆರಂಭದಲ್ಲಿ ಯುವತಿಗೆ ಅರಿವು ಇರಲಿಲ್ಲ. ಅರಿವಾದಾಗ ಸಹಾಯಕ್ಕೆ ಕೋರಿದ್ದರೂ ಮೆಟ್ರೊ ಸಹಪ್ರಯಾಣಿಕರು ನೆರವಿಗೆ ಬಂದಿರಲಿಲ್ಲ. ಆಕೆ ಅತ್ತು ಕಿರುಚಿದರೂ ಯಾರೂ ಆಕೆಯ ಸಹಾಯಕ್ಕೆ ಬರಲೇ ಇಲ್ಲ. ಯುವತಿಯ ಸ್ನೇಹಿತರು ಸಾಮಾಜಿಕ ಜಾಲತಾಣದಲ್ಲಿ ವಿಚಾರ ಬಹಿರಂಗ ಪಡಿಸಿದ್ದು, ತಪ್ಪಿತಸ್ಥನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಈ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.








