ಹೈದರಾಬಾದ್ : ಟಾಲಿವುಡ್ ನ ಯಂಗ್ ಟೈಗರ್ ಜೂ.ಎನ್ ಟಿಆರ್ ಸದ್ಯ ಆರ್ ಆರ್ ಆರ್ ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಇದರ ಜೊತೆಗೆ ಇದೀಗ ಮತ್ತೊಂದು ಸಿನಿಮಾದದಲ್ಲಿ ತಾರಕ್ ನಟಿಸುವುದು ಖಚಿತವಾಗಿದ್ದು, ಈ ಸಿನಿಮಾದಲ್ಲಿ ಕನ್ನಡದ ನಟಿ ಸಹ ಸ್ಥಾನ ಪಡೆದುಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಹೌದು..!
ಆರ್ ಆರ್ ಆರ್ ಸಿನಿಮಾದ ಜೊತೆಗೆ ಎನ್ ಟಿ ಆರ್ ಅವರ 30ನೇ ಸಿನಿಮಾದ ತಯಾರಿ ಸಹ ಭರದಿಂದ ಸಾಗಿದ್ದು, ಹಿರೋಯಿನ್ ಆಯ್ಕೆ ಪ್ರಕ್ರಿಯೆ ನಡೆದಿದೆ. ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ತಾರಕ್ ಗೆ ಆಕ್ಷನ್ ಕಟ್ ಹೇಳುತ್ತಿದ್ದು, ಈ ಸಿನಿಮಾದ ನಾಯಕಿ ಪಾತ್ರಕ್ಕೆ ಕನ್ನಡದ ನಟಿ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ತ್ರಿವಿಕ್ರಮ್ ನಿರ್ದೇಶನದ ಈ ಸಿನಿಮಾದಲ್ಲಿ ತಾರಕ್ ಜೊತೆ ಸ್ಯಾಂಡಲ್ ವುಡ್ ನಟಿ ನಭಾ ನಟೇಶ್ ನಟಿಸಲಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಪುರಿ ಜಗನ್ನಾಥ್ ನಿರ್ದೇಶನದ ‘ಇಸ್ಮಾರ್ಟ್ ಶಂಕರ್’ ಮೂಲಕ ಭರ್ಜರಿ ಬ್ರೇಕ್ ಪಡೆದಿರುವ ನಭಾಗೆ ಕನ್ನಡಕ್ಕಿಂತಲೂ ತೆಲುಗಿನಲ್ಲೇ ಹೆಚ್ಚು ಅವಕಾಶಗಳು ಸಿಗಲು ಆರಂಭಿಸಿವೆ. ಇದೀಗ ಎನ್ ಟಿಆರ್ ಸಿನಿಮಾದಲ್ಲಿ ಅವಕಾಶ ಪಡೆದಿದ್ದಾರೆ ಎನ್ನಲಾಗಿದೆ. ಆದರೆ ಈ ಕುರಿತು ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಅಂದ್ಹಾಗೆ ಈ ಸಿನಿಮಾದಲ್ಲಿ ಎನ್ ಟಿಆರ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಹೀಗಾಗಿ ಚಿತ್ರದ ಕುರಿತು ಭಾರೀ ನಿರೀಕ್ಷೆ ಹುಟ್ಟಿಕೊಂಡಿದೆ. ನಭಾ ನಟೇಶ್ ಮಾಡಬೇಕಿರುವ ಪಾತ್ರ ಸಹ ತೆಲಂಗಾಣ ಪ್ರಾಂತ್ಯದ ತೆಲುಗು ಭಾಷೆಯನ್ನು ಮಾತನಾಡಲಿದೆಯಂತೆ.








