ಪಾಕಿಸ್ತಾನದ ಕ್ರಿಕೆಟರ್ಸ್ ಗೆ ಕಿಲ್ಲರ್ ಕೊರೊನಾ ಶಾಕ್ ನೀಡಿದ್ದು, ಹಿರಿಯ ಆಟಗಾರರಾದ ಮೊಹಮ್ಮದ್ ಹಫೀಜ್, ವಹಾಬ್ ರಿಯಾಜ್, ಫಖ್ರ್ ಜಮಾನ್, ಇಮ್ರಾನ್ ಖಾನ್, ಖಾಷಿಫ್ ಭಟ್ಟಿ, ಮೊಹಮ್ಮದ್ ಹಸ್ನೇನ್ ಮತ್ತು ಮೊಹಮ್ಮದ್ ರಿಜ್ವಾನ್ ಅವರಿಗೆ ಸೋಂಕು ದೃಢಪಟ್ಟಿದೆ.
ಸೋಮವಾರ ಶಾದಾಬ್ ಖಾನ್, ಹೈದರ್ ಅಲಿ ಮತ್ತು ಹ್ಯಾರಿಸ್ ರವುಫ್ ಈ ಮೂವರು ಆಟಗಾರರಿಗೆ ಕೊರೊನಾ ಸೋಂಕು ಇರುವುದು ಖಚಿತವಾಗಿತ್ತು. ನಿನ್ನೆ ಮತ್ತೆ ಏಳು ಆಟಗಾರರಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಈ ವೇಳೆ ಎಲ್ಲರಿಗೂ ಕೊರೊನಾ ಸೋಂಕಿರುವುದು ದೃಢಪಟ್ಟಿದೆ.
‘ಸದ್ಯ ಸೋಂಕು ದೃಢಪಟ್ಟ ಆಟಗಾರರೊಂದಿಗೆ ಪಿಸಿಬಿಯ ವೈದ್ಯಕೀಯ ತಂಡವು ನಿರಂತರ ಸಂಪರ್ಕದಲ್ಲಿದೆ. ಈ ಆಟಗಾರರಿಗೆ ಅವರ ಮನೆಗಳಲ್ಲಿಯೇ ಕಟ್ಟುನಿಟ್ಟಿನ ಕ್ವಾರಂಟೈನ್ ಮಾಡಲಾಗಿದೆ. ಜೊತೆಗೆ ಕುಟುಂಬದ ಸದಸ್ಯರಿಗೂ ಕ್ವಾರಂಟೈನ್ ಮಾಡಲಾಗಿದೆ ಎಂದು ಪಿಸಿಬಿ ಪ್ರಕಟಣೆಯಲ್ಲಿ ತಿಳಿಸಿದೆ.
ಇನ್ನು ಈ ಬಗ್ಗೆ ಪಿಸಿಬಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ವಾಸೀಂ ಖಾನ್ ಸುದ್ದಿಗಾರರೊಂದಿಗೆ ಮಾತನಾಡಿದ್ದು, ನಮ್ಮ ಪಾಲಿಗೆ ಇದು ಒಳ್ಳೆಯ ಸುದ್ದಿಯಲ್ಲ. ಫಿಟ್ ಆಗಿದ್ದ 10 ಮಂದಿ ಆಟಗಾರರು ಕೊರೊನಾ ಪಾಸಿಟಿವ್ ಆಗಿರುವುದು ಆಘಾತ ತಂದಿರುವುದು ನಿಜ. ಸದೃಢ ಆಟಗಾರರಿಗೇ ಕೊರೊನಾ ಸೋಂಕು ತಗಲುವುದಾದ್ರೆ ಇನ್ನು ಸಾಮಾನ್ಯರಿಗೆ ಈ ಸೋಂಕು ಪೀಡಿಸುವುದು ಸಹಜ’ ಎಂದಿದ್ದಾರೆ.








